ಭ್ರಷ್ಟ ಪಿಎಸ್‌ಐಗೆ ಪಾಠ ಕಲಿಸಿದ ಎಸ್ಪಿ

ತುರುವೇಕೆರೆ,ಜ.೧೫-ಮೂರ್ನಾಲ್ಕು ತಿಂಗಳ ಹಿಂದೆಯೇ ದೂರು ದಾಖಲಾಗಿದ್ದರೂ ಆ ಪೊಲೀಸ್ ಠಾಣೆ ಪಿಎಸ್‌ಐ ಮಾತ್ರ ಆರೋಪಿಯನ್ನು ಬಂಧಿಸಿರಲಿಲ್ಲ. ದೂರುದಾರರು ನಿತ್ಯ ಠಾಣೆಗೆ ಅಲೆದು ಅಲೆದು ಸಾಕಾಗಿತ್ತು. ಸರ್ ಆರೋಪಿ ಅಲ್ಲೇ ಇದ್ದಾನೆ ಬನ್ನಿ ಅರೆಸ್ಟ್ ಮಾಡಿ ಅಂದ್ರೆ ಆರೋಪಿಯನ್ನು ಕರೆ ತರಲು ಬಾಡಿಗೆ ಕಾರು ತನ್ನಿ ಎಂದು ಸೂಚಿಸಿದ್ದ ದಂಡಿನಶಿವರ ಪೊಲೀಸ್ ಠಾಣೆ ಪಿಎಸ್‌ಐ ಶಿವಲಿಂಗಯ್ಯಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್ ಅವರು ದೂರುದಾರನಿಗೆ ತನ್ನ ಕಾರನ್ನು ನೀಡುವ ಮೂಲಕ ಭ್ರಷ್ಟ ಪಿಎಸ್‌ಐಗೆ ತಕ್ಕಪಾಠ ಕಲಿಸಿರುವ ಘಟನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಅವರ ಈ ದಿಟ್ಟ ನಿರ್ಧಾರದಿಂದ ದಂಡಿನಶಿವರ ಸಬ್‌ಇನ್ಸ್‌ಪೆಕ್ಟರ್ ಬೆಚ್ಚಿ ಬಿದ್ದಿದ್ದಾರೆ.
೨೦೨೧ರ ಆಗಸ್ಟ್ ೨೮ ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಗೇಂದ್ರಪ್ಪ ಹಾಗೂ ಪಕ್ಕದ ಮನೆಯ ಶಿವಪ್ರಕಾಶ್ ಮತ್ತು ಪ್ರಕಾಶ್ ಎಂಬುವರ ಮಗ ಚಂದನ್ ನಡುವೆ ಜಗಳವಾಗಿತ್ತು.
ಆ ವೇಳೆ ನಾಗೇಂದ್ರಪ್ಪ ಹಾಗೂ ಪತ್ನಿ ಶಿವಮ್ಮಗೆ ಚಂದನ ಮತ್ತು ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದರು ಎಂದು ಹೇಳಲಾಗಿದೆ. ನಾಗೇಂದ್ರಪ್ಪ ಮತ್ತು ಶಿವಮ್ಮಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಇದು ಮಾರಣಾಂತಿಕ ಹಲ್ಲೆ ಎಂದು ವರದಿ ನೀಡಿದ್ದಾರೆ. ಇದನ್ನು ಪಡೆದ ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆಗೆ ಕೊಲೆ ಪ್ರಯತ್ನ ಕೇಸ್ ನೀಡಿದ್ದರು.
ಆರೋಪಿಗಳನ್ನು ಬಂಧಿಸದೆ ಪಿಎಸ್‌ಐ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪ್ರಕಾಶ್‌ಗೆ ಜಾಮೀನು ದೊರೆತಿದ್ದು, ಚಂದನ್ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿ ಚಂದನ್‌ನನ್ನು ಬಂಧಿಸುವಂತೆ ದೂರುದಾರ ನಾಗೇಂದ್ರಪ್ಪ ಠಾಣೆಗೆ ಬಂದು ಪಿಎಸ್‌ಐ ಬಳಿ ಮನವಿ ಮಾಡಿಕೊಂಡಾಗ, ಆರೋಪಿಯನ್ನು ಬಂಧಿಸೋಣ. ಅದಕ್ಕಾಗಿ ನೀನೊಂದು ಬಾಡಿಗೆ ವಾಹನ ಮಾಡಿಕೊಂಡು ಬಾ ಎಂದು ಪಿಎಸ್‌ಐ ಶಿವಲಿಂಗಯ್ಯ ಹೇಳಿದ್ದರು ಎನ್ನಲಾಗಿದೆ.
ತನಿಖೆಗೆ ಆಗ್ರಹಿಸಿ ಪದೇ ಪದೇ ಠಾಣೆಗೆ ಭೇಟಿ ನೀಡುತ್ತಿದ್ದ ನಾಗೇಂದ್ರಪ್ಪ ಪಿಎಸ್‌ಐ ವರ್ತನೆಗೆ ರೋಸಿ ಹೋಗಿ ತುಮಕೂರಿಗೆ ಬಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಅವರನ್ನು ಭೇಟಿಯಾಗಿ ಕಣ್ಣೀರಿಟ್ಟಿದ್ದರು. ಪಿಎಸ್‌ಐ ವರ್ತನೆಗೆ ಕೆಂಡಾಮಂಡಲರಾದ ಎಸ್ಪಿ ರಾಹುಲ್ ಅವರು ಸ್ವತಃ ತಮ್ಮ ಕಾರಿನಲ್ಲೇ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನು ಕುಳಿತುಕೊಳ್ಳುವಂತೆ ಹೇಳಿ, ತಮ್ಮ ಕಾರು ಚಾಲಕನಿಗೆ ಕರೆದು ಇವರನ್ನು ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ ಎಂದಿದ್ದಾರೆ. ಕಾರು ಬಂದಿದೆ ಆರೋಪಿಯನ್ನು ಬಂಧಿಸುವಂತೆ ಪಿಎಸ್‌ಐ ಅವರನ್ನು ಕೇಳಿ ಎಂದು ನಾಗೇಂದ್ರಪ್ಪಗೆ ಹೇಳಿ ಕಳುಹಿಸಿದ್ದರು.
ಪೊಲೀಸ್ ಠಾಣೆ ಮುಂದೆ ಸಾಹೇಬರ ಕಾರು ಕಂಡೊಡನೆ ದಂಗಾದ ದಂಡಿನಶಿವರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ನಿಂತಲ್ಲಿಯೇ ಬೆವತು ಹೋಗಿದ್ದಾರೆ. ಅಷ್ಟೇ ಅಲ್ಲ, ದಂಡಿನಶಿವರ ಪಿಎಸ್‌ಐ ಶಿವಲಿಂಗಯ್ಯಗೆ ದೂರವಾಣಿ ಕರೆ ಮಾಡಿದ ಎಸ್ಪಿ ರಾಹುಲ್‌ಕುಮಾರ್, ಆರೋಪಿ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಖಡಕ್ ವಾರ್ನಿಂಗ್ ಬೆಚ್ಚಿ ಬಿದ್ದ ಪಿಎಸ್‌ಐ ಶಿವಲಿಂಗಯ್ಯ ರಾತ್ರಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ವಶಕ್ಕೆ ಪಡೆದಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.