ಭ್ರಷ್ಟ ಅಧಿಕಾರಿ ಬಿರಾದಾರ್ ಮೇಲೆ ಎಸಿಬಿ ದಾಳಿ: ಶೌಚಾಲಯದ ಪೈಪ್‍ನಲ್ಲಿ ಹರಿದು ಬಂತು ಲಕ್ಷ, ಲಕ್ಷ ನೋಟಿನ ಕಂತೆ!

ಕಲಬುರಗಿ,ನ.24: ಅಕ್ರಮ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಜೇವರ್ಗಿ ಉಪವಿಭಾಗದ ಯಡ್ರಾಮಿ ವೃತ್ತದ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಶಾಂತಗೌಡ ಬಿರಾದಾರ್ ಅವರ ಆಸ್ತಿ, ಪಾಸ್ತಿ ಮೇಲೆ ಬುಧವಾರ ಬೆಳಂಬೆಳಿಗ್ಗೆ ಕಲಬುರ್ಗಿ, ಯಡ್ರಾಮಿ, ಜೇವರ್ಗಿಯಲ್ಲಿರುವ ಕಚೇರಿ ಸೇರಿದಂತೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಏಕಕಾಲಕ್ಕೆ ಏಳು ಕಡೆಗೆ ದಾಳಿ ಮಾಡಿ ಸುಮಾರು 8 ಕೋಟಿ ರೂ.ಗಳಷ್ಟು ಮೌಲ್ಯದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ಹೇಳಿವೆ.
ನಗರದ ಗುಬ್ಬಿ ಕಾಲೋನಿಯಲ್ಲಿನ ಶಾಂತಗೌಡ ಬಿರಾದಾರ್ ಅವರ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ಪ್ರತ್ಯೇಕ ತಂಡಗಳಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದರು.
ಯಾದಗಿರಿ ಜಿಲ್ಲೆಯ ಅಧಿಕಾರಿಗಳ ತಂಡ ಎಸಿಬಿ ಈಶಾನ್ಯ ವಲಯದ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಅವರ ನೇತೃತ್ವದಲ್ಲಿ ಶಾಂತಗೌಡ ಬಿರಾದಾರ್ ಅವರ ಮನೆಗಳ ಮೇಲೆ ನಾಲ್ಕು ಕಾರುಗಳಲ್ಲಿ ಬಂದ ಅಧಿಕಾರಿಗಳು ದಾಳಿ ಮಾಡಿದರು. ನಗರದ ಗುಬ್ಬಿ ಕಾಲೋನಿಯಲ್ಲಿನ ಮೂರತಂಸ್ತಿನ ಭವ್ಯ ಬಂಗ್ಲೆ ಕಾರ್ಯಾಚರಣೆಯಲ್ಲಿ ಹೆಚ್ಚು ಗಮನಸೆಳೆಯಿತು. ಬಡೇಪೂರ್ ಕಾಲೋನಿಯಲ್ಲಿಯೂ ಒಂದು ಮನೆ, ವಿಶ್ವವಿದ್ಯಾಲಯದ ರಸ್ತೆಯಲ್ಲಿ ಎರಡು ನಿವೇಶನಗಳು, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದಲ್ಲಿ 40 ಎಕರೆ ಜಮೀನು, ಮೂರು ಮನೆಗಳು ಸೇರಿ ಕೋಟಿ, ಕೋಟಿ ರೂ.ಗಳ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇನ್ನು ಬೆಂಗಳೂರಿನಲ್ಲಿಯೂ ಆಸ್ತಿ ಇರುವ ಮಾಹಿತಿ ಸಿಕ್ಕಿದ್ದು, ಎರಡು ಕಾರುಗಳು, ಎರಡು ದ್ವಿಚಕ್ರವಾಹನಗಳು ಸಹ ಕಾರ್ಯಾಚರಣೆಯಲ್ಲಿ ಪತ್ತೆಯಾಗಿವೆ.
ನಗರದ ಗುಬ್ಬಿ ಕಾಲೋನಿಯಲ್ಲಿನ ಮನೆಯಲ್ಲಿನ ತಿಜೋರಿ, ಮಲಗುವ ಕೋಣೆ ಜಾಲಾಡಿದ ತಂಡಕ್ಕೆ ಪ್ಲಂಬಿಂಗ್ ಪೈಪ್‍ನಲ್ಲಿ ಹಣ ಇರುವ ಕುರಿತು ಖಚಿತ ಮಾಹಿತಿ ದೊರಕಿತು. ಹೀಗಾಗಿ ಪ್ಲಂಬರ್ ಕರೆದು ಪೈಪ್ ಕೊರೆಸಿದಾಗ 500ರೂ.ಗಳ ಮುಖಬೆಲೆಯ ನೋಟುಗಳು ಸಿಕ್ಕಿವೆ. ಇಲ್ಲಿಯವರೆಗೆ ಸುಮಾರು 40 ಲಕ್ಷ ರೂ.ಗಳ ನಗದು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಂಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ನಗರದ ಗುಬ್ಬಿ ಕಾಲೋನಿಯಲ್ಲಿನ ಶಾಂತಗೌಡ ಬಿರಾದಾರ್ ಅವರ ಮನೆಗೆ ಹೋದಾಗ ಅನುಮಾನಗೊಂಡ ಶಾಂತಗೌಡರು ಹತ್ತು ನಿಮಿಷಗಳ ಕಾಲ ಬಾಗಿಲು ತೆರೆಯದೇ ಸತಾಯಿಸಿದರು. ಆ ಸಂದರ್ಭದಲ್ಲಿಯೇ ಪೈಪ್‍ನಲ್ಲಿ ಹಣ ಹಾಗೂ ಚಿನ್ನಾಭರಣವನ್ನು ಬೀಸಾಕಿದ್ದಾರೆ ಎಂದು ಹೇಳಲಾಗಿದೆ. ಸುಳಿವು ಹೊಂದಿದ್ದ ಅಧಿಕಾರಿಗಳು ಸ್ನಾನದ ಕೋಣೆಯಲ್ಲಿನ ಬಕೆಟ್ ಹಾಗೂ ಪೈಪ್‍ಗಳನ್ನು ಶೋಧಿಸಿದಾಗ ಅಲ್ಲಿಯೂ ಸಹ ನೋಟಿನ ಕಂತೆಗಳು ದೊರಕಿದವು. ನಂತರ ಹೊರಗಡೆ ಮನೆ ಆವರಣದ ಗೋಡೆಯನ್ನು ಹತ್ತಿ ಟೆರೆಸ್ ಕೆಳಗೆ ಶೌಚಾಲಯದ ಪೈಪನ್ನು ಕೊರೆದಾಗ 500ರೂ.ಗಳ ಮುಖಬೆಲೆಯ ನೋಟಿನ ಕಂತೆಗಳನ್ನು ಬಕೆಟ್‍ನಲ್ಲಿ ತುಂಬಿಕೊಂಡು ಪರಿಶೀಲಿಸಿದರು. ಶೋಧ ಕಾರ್ಯ ಮುಂದುವರೆದಿದೆ. ಇನ್ನೂ ಎರಡು ಲಾಕರ್‍ಗಳ ಕೀಗಳು ಕಳೆದಿವೆ ಎಂದು ಶಾಂತಗೌಡ ಬಿರಾದಾರ್ ಅವರು ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ದಾಖಲೆಗಳನ್ನು ಪರಿಶೀಲಿಸುವುದನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ.
ಒತ್ತಡಕ್ಕೆ ಒಳಗಾದ ಬಿರಾದಾರ್: ಭ್ರಷ್ಟಾಚಾರ ನಿಗ್ರಹದಳವು ಗುಬ್ಬಿ ಕಾಲೋನಿಯ ಮನೆಯ ಮೇಲೆ ದಾಳಿ ಮಾಡಿ ಹಣ ಹಾಗೂ ಇತರೆ ಅಕ್ರಮ ಸಂಪತ್ತನ್ನು ಜಾಲಾಡುವುದನ್ನು ಕಣ್ಣಾರೆ ಕಂಡ ಶಾಂತಗೌಡ ಬಿರಾದಾರ್ ಅವರು ಒತ್ತಡಕ್ಕೆ ಒಳಗಾದರು. ಒಂದು ಹಂತದಲ್ಲಿ ವೇದನೆಯಿಂದ ಸೋಫಾದ ಮೇಲೆ ಹೊರಳಾಡಲಾರಂಭಿಸಿದರು. ಅದನ್ನು ಗಮನಿಸಿದ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ತಕ್ಷಣವೇ ಮನೆಗೆ ವೈದ್ಯರನ್ನು ಕರೆಸಿಕೊಂಡರು. ವೈದ್ಯರ ನಿಗಾದಲ್ಲಿಯೇ ಬಿರಾದಾರ್ ಅವರ ವಿಚಾರಣೆಯನ್ನು ಅಧಿಕಾರಿಗಳು ಮುಂದುವರೆಸಿದರು.
ಅಕ್ರಮ ಸಂಪತ್ತು: ಯಡ್ರಾಮಿ ವೃತ್ತದಲ್ಲಿನ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಶಾಂತಗೌಡ ಬಿರಾದಾರ್ ಅವರ ಸ್ವಗ್ರಾಮ ಯಡ್ರಾಮಿ ತಾಲ್ಲೂಕಿನ ಹಂಗರಗಾ(ಬಿ). ಕಳೆದ ಹನ್ನೊಂದು ವರ್ಷಗಳಿಂದಲೂ ಯಡ್ರಾಮಿ ವೃತ್ತದ ಜೆಇಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1994ರಿಂದ 2001ರವರೆಗೆ ಶಾಂತಗೌಡ ಬಿರಾದಾರ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ವಿಜಯಪುರದಲ್ಲಿ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ನಂತರ ವಿಜಯಪುರ ಜಿಲ್ಲೆಯ ಆಲಮೇಲಕ್ಕೆ ಕೃಷ್ಣಾ ಭಾಗ್ಯ ಜಲನಿಗಮಕ್ಕೆ ವರ್ಗಾವಣೆಯಾಗಿ ಸೇವೆ ಖಾಯಂಗೊಳಿಸಿಕೊಂಡರು. ನಂತರ ಅಲ್ಲಿಂದ ಯಡ್ರಾಮಿ ವೃತ್ತದ ಕಿರಿಯ ಅಭಿಯಂತರರಾಗಿ ಕಳೆದ ಹನ್ನೊಂದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಂತಗೌಡ ಬಿರಾದಾರ್ ಅವರಿಗೆ ಹಂಗರಗಾ (ಬಿ) ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿಯಾಗಿ ಕೇವಲ ಎರಡು ಎಕರೆ ಜಮೀನು ಇತ್ತು. ಆದಾಗ್ಯೂ, ಈಗ ಹಂಗರಗಾ (ಬಿ) ಗ್ರಾಮದಲ್ಲಿಯೇ ಸುಮಾರು 40 ಎಕರೆಯಲ್ಲಿ ಫಾರ್ಮ್‍ಹೌಸ್ ನಿರ್ಮಾಣ ಮಾಡಿದ್ದು, ತೆಂಗು, ಕಬ್ಬು ಬೆಳೆದಿದ್ದಾರೆ. ಮುಕ್ಕಾಣಿ, ಬಳಬಟ್ಟಿ ಗುತ್ತಿಗೆದಾರರ ಹೆಸರಿನಲ್ಲಿ ಆರು ಟಿಪ್ಪರ್‍ಗಳನ್ನು, ಎರಡು ಹಿಟ್ಯಾಚಿಗಳನ್ನು ಅಧಿಕಾರಿಯೇ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಜೇವರ್ಗಿಯಲ್ಲಿ ಎರಡು ಮನೆಗಳನ್ನು ತಂಗಿಯ ಹೆಸರಿನಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಸೌಲಭ್ಯಗಳು, ಸಿಸಿ ರಸ್ತೆ ಸೇರಿದಂತೆ ಹಲವು ಸೌಲಭ್ಯಗಳನ್ನು ತಮ್ಮ ತೋಟದ ಮನೆಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಎಸ್‍ಸಿಪಿ, ಟಿಎಸ್‍ಪಿ ಹಣವನ್ನು ಸಹ ಅನ್ಯ ಕಾರಣಗಳಿಗೆ ಬಳಕೆ ಮಾಡುವ ಮೂಲಕ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಆರೋಪವೂ ಅಧಿಕಾರಿಯ ಮೇಲಿದೆ. ಬೆಂಗಳೂರಿನಲ್ಲಿಯೂ ಸಹ ಬಾಡಿಗೆ ಮನೆ ಇದ್ದು, ಅಲ್ಲಿಯೂ ಸಹ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.