ತುಮಕೂರು, ಜೂ. ೨೮- ತಮ್ಮ ಆದಾಯಕ್ಕಿಂತ ಮೀರಿ ಅಕ್ರಮವಾಗಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ, ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿದ್ದಾರೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್. ರವಿ ಹಾಗೂ ಸಿರಾ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಇಂಜಿನಿಯರ್ ಕೆ.ಬಿ. ಪುಟ್ಟರಾಜು ಎಂಬುವರ ಮನೆ ಮೇಲೆ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ನಡೆಸುವ ಮೂಲಕ ಶಾಕ್ ನೀಡಿದ್ದಾರೆ.
ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್. ರವಿ ಅವರ ರಾಮನಗರದ ಮನೆ, ಫಾರಂಹೌಸ್, ಕಾಂಪ್ಲೆಕ್ಸ್ ಹಾಗೂ ತುಮಕೂರಿನ ಬಾಡಿಗೆ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಅಗತ್ಯ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತುಮಕೂರಿನ ಆರ್.ಟಿ. ನಗರದ ಶಂಕರಪುರಂನಲ್ಲಿ ಬಾಡಿಗೆ ಮನೆಯಲ್ಲಿ ಜಂಟಿ ಕೃಷಿ ನಿರ್ದೇಶಕ ರವಿ ಅವರು ವಾಸವಿದ್ದು, ಬೆಳಿಗ್ಗೆಯೇ ಎರಡು ಕಾರಿನಲ್ಲಿ ಬಂದಿರುವ ೬ ಜನ ಲೋಕಾಯುಕ್ತ ಅಧಿಕಾರಿಗಳು ಬಾಡಿಗೆ ನಿವಾಸದಲ್ಲಿರುವ ದಾಖಲಾತಿಗಳ ಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ೭ ತಿಂಗಳ ಹಿಂದೆಯಷ್ಟೇ ಕೆ.ಹೆಚ್. ರವಿ ಅವರು ಹಾಸನದಿಂದ ತುಮಕೂರು ಕೃಷಿ ಇಲಾಖೆಗೆ ವರ್ಗಾವಣೆಯಾಗಿ ಬಂದಿದ್ದರು.
ಇನ್ನು ಸಿರಾ ಪಿಆರ್‌ಇಡಿ ಸಹಾಯಕ ಇಂಜಿನಿಯರ್ ಪುಟ್ಟರಾಜು ಅವರು ತುಮಕೂರಿನ ಅಶೋಕನಗರದ ನಿವಾಸಿಯಾಗಿದ್ದು, ಈ ಮನೆ ಮೇಲೂ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತರು ದಾಳಿ ಮಾಡಿ ಎಲ್ಲ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮತ್ತೊಂದು ಅಧಿಕಾರಿಗಳ ತಂಡ ಯಲ್ಲಾಪುರದ ಕಮರ್ಷಿಯಲ್ ಕಾಂಪ್ಲೆಕ್ಸ್, ಸಿರಾ ಕಚೇರಿ, ಇನ್ನೊಂದು ತಂಡ ಇಂಜಿನಿಯರ್ ತಂದೆಯ ಭದ್ರಾವತಿ ಮನೆಯಲ್ಲೂ ಶೋಧನಾ ಕಾರ್ಯದಲ್ಲಿ ತೊಡಗಿದೆ. ಮಧ್ಯಾಹ್ನದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಲೋಕಾಯುಕ್ತ ಎಸ್ಪಿ ವಲಿ ಭಾಷಾ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್ ಮತ್ತು ಸಿಬ್ಬಂದಿ ವರ್ಗ ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ಮನೆ, ಕಚೇರಿ, ಕಾಂಪ್ಲೆಕ್ಸ್‌ಗಳ ಮೇಲೆ ದಾಳಿ ನಡೆಸಿದ್ದು, ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.