ಭ್ರಷ್ಟ ಅಧಿಕಾರಿಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ಯಾವುದೇ ಮುಲಾಜಿಲ್ಲದೇ ಕ್ರಮ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಜೂ.16: ಕ್ಷೇತ್ರದ ಜನತೆ ತಮ್ಮ ಯಾವುದೇ ಸಮಸ್ಯೆ ಮತ್ತು ಕೆಲಸ ಕಾರ್ಯಗಳಿದ್ದಲ್ಲಿ, ನೇರವಾಗಿ ನನಗೆ ಕರೆ ಮಾಡಿ ಅಥವಾ ನಮ್ಮ ಮನೆಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿ ನಾನು ಸದಾ ತಮ್ಮ ಸೇವೆಗೆ ಸಿದ್ಧನಿದ್ದೇನೆ. ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸಾರ್ವಜನಿಕರೊಂದಿಗೆ, ರೈತರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಲು ತಿಳಿಸಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು,

ತಾಲೂಕಿನ ಯಕ್ಕಂಚಿ ಗ್ರಾಮದ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಕ್ಕಂಚಿ ಗ್ರಾಮದಲ್ಲಿ ಮತದಾನವಾದ ಒಟ್ಟು 1750 ಮತಗಳ ಪೈಕಿ 1460 ಮತಗಳನ್ನು ನನಗೆ ನೀಡಿ ಇಡೀ ಗ್ರಾಮವು ನನ್ನ ಬೆನ್ನಿಗೆ ನಿಂತು ಆಶೀರ್ವದಿಸಿದೆ. ಗ್ರಾಮಸ್ಥರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ, ನನ್ನ ಮೇಲಿಟ್ಟ ಪ್ರೀತಿ ವಿಶ್ವಾಸ ನಂಬಿಕೆಗೆ ನಾನು ಯಾವತ್ತೂ ಚಿರಋಣಿ 1,31,404 ಮತಗಳನ್ನು ನೀಡಿ ರಾಜ್ಯದಲ್ಲಿಯೇ
ಹೆಚ್ಚು ಮತಗಳ ಅಂತರದಿಂದ ಗೆದ್ದವರಲ್ಲಿ 3ನೇ ಸ್ಥಾನ ನೀಡಿದ ಅಥಣಿ ಮತಕ್ಷೇತ್ರದ ಸಮಸ್ತ ಮತದಾರ ಬಾಂಧವರೆಲ್ಲರ ಋಣ ನನ್ನ ಮೇಲಿದೆ ಅದನ್ನ ತೀರಿಸುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಮುಂದಿನ 2028ರ ವಿಧಾನಸಭೆ ಚುನಾವಣೆ ವೇಳೆಗೆ ತಮ್ಮೆಲ್ಲರ ಮನಸ್ಸು ಗೆಲ್ಲುವ ಕಾರ್ಯಗಳನ್ನು ಮಾಡಿ, 2023ರಲ್ಲಿ ಲಕ್ಷ್ಮಣ ಸವದಿಯವರನ್ನು ಗೆಲ್ಲಿಸಿದ್ದಕ್ಕೆ ಸಾರ್ಥಕವಾಯಿತು, ಎನ್ನುವಂತೆ ಅಥಣಿ ಮತಕ್ಷೇತ್ರದ ಅಭಿವೃದ್ಧಿ ಹಾಗೂ ಪ್ರಾಮಾಣಿಕವಾಗಿ ತಮ್ಮೆಲ್ಲರ ಸೇವೆ ಮಾಡುತ್ತೇನೆ, ಭ್ರಷ್ಟ ಅಧಿಕಾರಿಗಳಿಗೆ ಇನ್ನು ತಾಲೂಕಿನಲ್ಲಿ ಉಳಿಗಾಲವಿಲ್ಲ. ಯಾರೇ ನಿಮ್ಮ ನ್ಯಾಯಯುತ ಕೆಲಸ ಕಾರ್ಯಗಳಿಗೆ ಹಣದ ಬೇಡಿಕೆ ಇಟ್ಟರೆ ತಕ್ಷಣವೇ ಅಂಥವರಿಗೆ ಶಾಸಕರಾದ ಲಕ್ಷ್ಮಣ ಸವದಿಯವರಿಗೆ ತಿಳಿಸುತ್ತೇವೆ ಎಂದು ಹೇಳಬೇಕು. ಅಂಥವರ ಬಗ್ಗೆ ನನ್ನ ಗಮನಕ್ಕೆ ತಂದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಹಲವಾರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು,
ಸಮಸ್ತ ಯಕ್ಕಂಚಿ ಗ್ರಾಮಸ್ಥರ ಪರವಾಗಿ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು

ಈ ವೇಳೆ ಮಲ್ಲಯ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಮುತ್ತಣ್ಣ ಕಾತ್ರಾಳ, ಘಟವಾಳಪ್ಪಾ ಗುಡ್ಡಾಪೂರ, ಶಿವಾನಂದ ಗೋಲಬಾವಿ, ಶಿದರಾಯ ನಾಯಿಕ, ಶ್ರೀಶೈಲ ಹಳದಮಳ್ಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು ಶಿವಯ್ಯಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು,

ಅಥಣಿ ಮತಕ್ಷೇತ್ರದ ಶೇ.99 ರಷ್ಟು ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ, ಈಗಾಗಲೇ ಕರಿ ಮಸೂತಿ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಸೂಚಿಸಲಾಗಿತ್ತು, ಆದರೆ ಮಳೆಯ ಅಭಾವದಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಕೊರತೆ ಉಂಟಾಗಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ನದಿಗೆ ನೀರು ಬಂದ ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಲಾಗುವುದು,

     ---  ಲಕ್ಷ್ಮಣ ಸವದಿ ಶಾಸಕರು