ಭ್ರಷ್ಟ ಅಧಿಕಾರಗಳ ನಿಯಂತ್ರಣ ಕಷ್ಟಕರ-ಡಿಕೆಶಿ

ಕನಕಪುರ, ಜು೨೫: ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರದಂತೆ ತಾಲ್ಲೂಕು ಹೊರತಾಗಿಲ್ಲ, ನಮ್ಮ ತಾಲ್ಲೂಕಿನಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆಸಿದ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಗಳಲ್ಲಿನ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕೆಲಸಗಳ ಒತ್ತಡದಿಂದ ಕ್ಷೇತ್ರದ ಕಡೆಗೆ ಬರಲು ಸಾಧ್ಯವಾಗಿಲ್ಲ. ಅದನ್ನೇ ಅವಕಾಶ ಮಾಡಿಕೊಂಡ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡದೆ, ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಯಾವ ಇಲಾಖೆಗಳು ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಎಲ್ಲಾ ಇಲಾಖೆಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎಂದು ಹರಿಹಾಯ್ದರು.
ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ನಗರಸಭೆ, ಸರ್ವೇ ಇಲಾಖೆಗಳು ತೀವ್ರ ಅದ್ವಾನವಾಗಿವೆ, ಇನ್ನು ಮುಂದೆ ನೀವು ಇಂತಹ ಕೆಲಸಕ್ಕೆ ಇಷ್ಟು ರೇಟ್ ಎಂದು ಹೋಟೆಲ್‌ನಲ್ಲಿ ಇಡ್ಲಿ, ದೋಸೆ, ವಡೆಗೆ ರೇಟ್ ಲಿಸ್ಟ್ ಹಾಕಿದ ರೀತಿಯಲ್ಲಿ ನಿಮ್ಮ ಕಚೇರಿ ಮುಂದೆ ರೇಟ್ ಲೀಸ್ಟ್ ಬೋರ್ಡ್ ಹಾಕಿ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ಅಧಿಕಾರಿಗಳಿಗೆ ಭಯವಿಲ್ಲ, ಯಾರು ಕೇಳಿದರೂ ನಾವು ಇಷ್ಟು ಎಂದು ಹಣಕೊಟ್ಟು ಬಂದಿದ್ದೇವೆ. ನಾವು ತೆಗೆದುಕೊಳ್ಳುವ ಹಣದಲ್ಲಿ ಶಾಸಕರಿಗೆ, ಸಂಸದರಿಗೆ, ಸಚಿವರಿಗೆ ಇಷ್ಟು ಎಂದು ಕೊಡಬೇಕು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂಬ ಮಾಹಿತಿಯಿದೆ. ನನಗೆ ಮತ್ತು ನನ್ನ ತಮ್ಮನಿಗೆ ಎಷ್ಟು ಕೊಡುತ್ತೀರಿ ಎಂದು ಬಹಿರಂಗವಾಗಿ ಸಭೆ ಹೇಳಿ ಎಂದು ಆಗ್ರಹಿಸಿದರು.
ಸಭೆಯ ಮಧ್ಯದಲ್ಲಿ ರಾಮನಗರ ಜಿಲ್ಲಾಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಮಾತನಾಡಿ ಕನಕಪುರದಲ್ಲಿ ಇಲಾಖೆಗಳಲ್ಲಿ ಯಾವ ಕೆಲಸವು ಆಗುತ್ತಿಲ್ಲ, ಎಲ್ಲಾ ಅದ್ವಾನವಾಗಿದೆ. ಅಧಿಕಾರಿಗಳು ದಿನವಹಿ ಕೆಲಸ ನಿರ್ವಹಿಸುವ ಸಂಬಂಧ ವಾಟ್ಸ್‌ಆಫ್ ಗ್ರೂಪ್ ಮಾಡಿ ಅದರಲ್ಲಿ ಪ್ರತಿದಿನದ ದಿನಚರಿ ನಮೂದಿಸಿ ಮಾಹಿತಿ ನೀಡುವಂತೆ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ನಗರಸಭೆ ಕಮೀಷನರ್, ಸರ್ವೇ ಇಲಾಖೆ ಎಡಿಎಲ್‌ಆರ್ ಸೇರಿದಂತೆ ಎಲ್ಲಾ ಇಲಾಖೆಗಳ ಮುಂದೆ ಅಧಿಕಾರಿ, ಎಂಎಲ್‌ಎ, ಎಂಪಿ, ಲೋಕಾಯುಕ್ತ, ಎಸಿಬಿ ಅಧಿಕಾರಿಗಳ ನಂಬರನ್ನು ಹಾಕಿ ಲಂಚ ಕೇಳಿದರೆ ಈ ನಂಬರ್‌ಗಳಿಗೆ ದೂರು ನೀಡುವಂತೆ ಕ್ರಮವಹಿಸಬೇಕು. ಕಚೇರಿಗಳಲ್ಲಿ ಲಂಚ ನಿಲ್ಲದಿದ್ದರೆ ಎಸಿಬಿಗೆ ತಾವೇ ದೂರು ಕೊಡುವುದಾಗಿ ಎಚ್ಚರಿಸಿದರು.
ಕೆಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಶಿವಕುಮಾರ್ ಅವರು ಸಭೆಯನ್ನು ಅರ್ಧಕ್ಕೆ ಮುಕ್ತಾಯಗೊಳಿಸಿ ಮತ್ತೊಂದು ದಿನ ಉಳಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ವಿ.ಆರ್.ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಇಒ ಎಲ್.ಮಧು, ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ.ಕೃಷ್ಣ, ನಗರಸಭೆ ಆಯುಕ್ತೆ ಬಿ.ಶುಭ ಸೇರಿದಂತೆ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.