ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಗುತ್ತೇದಾರ್ ಮನವಿ

ಕಲಬುರಗಿ.ಮಾ.07:ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಲಂಚ ಪಡೆಯುವದು ಮಿತಿಮೀರಿದ್ದು, ಬಿಜೆಪಿ ಶಾಸಕ ವಿರುಪಾಕ್ಷಪ್ಪಾ ಮಾಡಾಳ್ ಅವರ ಪುತ್ರ ಲಂಚ ಪಡೆಯುವಾಗಲೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಅವರ ಮನೆ ಹಾಗೂ ಕಚೇರಿಗಳಲ್ಲಿ ಕೋಟಿ ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ. ಭ್ರಷ್ಟಾಚಾರವನ್ನು ವಿರೋಧಿಸಿ ತಕ್ಷಣ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಾರ್ಚ್ 9ರಂದು ಬೆಳಿಗ್ಗೆ 9ರಿಂದ ಬೆಳಿಗ್ಗೆ 11 ಗಂಟೆಯವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಜಿಲ್ಲೆಯಲ್ಲಿ ಬಂದ್ ಕರೆಯನ್ನು ಯಶಸ್ವಿಗೊಳಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಮನವಿ ಮಾಡಿದ್ದಾರೆ.
ಬಂದ್ ಕರೆಯನ್ನು ಯಶಸ್ವಿಗೊಳಿಸಲು ಎಲ್ಲ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕು. ಬಂದ್ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗಳು, ಆಸ್ಪತ್ರೆ, ಆಂಬ್ಯುಲೆನ್ಸ್ ಸೇವೆ ಇತ್ಯಾದಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.
ಪಕ್ಷದ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರು, ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ಬಿಸಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿವಿಧ ಮುಂಚೂಣಿ ಘಟಕ/ವಿಭಾಗ/ಸೆಲ್‍ಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಾನಗರ ಪಾಲಿಕೆಯ ಸದಸ್ಯರು, ಎಪಿಎಂಸಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಎಲ್ಲ ಚುನಾಯಿತ ಸದಸ್ಯರು, ಮಹಿಳೆಯರು, ಯುವಕರು, ಪಕ್ಷದ ಹಿತೈಸಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಕ್ಷೇತ್ರದ ವ್ಯಾಪ್ತಿಗಳಲ್ಲಿ ಸಾರ್ವಜನಿಕರಲ್ಲಿ ಮಿತಿಮೀರಿದ ಭ್ರಷ್ಟಾಚಾರ ಮತ್ತು ಲಂಚದ ಬಗ್ಗೆ ಅರಿವು ಮೂಡಿಸಿ ತಿಳುವಳಿಕೆಯ ಮೂಲಕ ಮನವೊಲಿಸಿ ಕಾಂಗ್ರೆಸ್ ಪಕ್ಷದ ಈ ಕರ್ನಾಟಕ ಬಂದ್‍ನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಿಕೊಡಬೇಕು ಎಂದುಅ ವರು ಮನವಿ ಮಾಡಿದ್ದಾರೆ.