
ಬೆಳಗಾವಿ.ಮಾ.೬: ರಾಜ್ಯದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಕಾಂಗ್ರೆಸ್ ಇದೇ ದಿ. ೯ ರಂದು ಬಂದ್ ಕರೆ ನೀಡಿದೆ, ಪರಿಶುದ್ಧ ರಾಜಕಾರಣವೇ ನಮ್ಮ ಗುರಿ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಅಲ್ಪಾವಧಿ ಟೆಂಡರ್ ಕರೆದು, ಅಪ್ರೂವಲ್ ಮಾಡಿ, ಅಡ್ವಾನ್ಸ್ ಪೇಮೆಂಟ್ ಮಾಡಿ, ಕಮಿಷನ್ ಕೀಳಲಾಗುತ್ತಿದೆ ಎಂದು ಆರೋಪಿಸಿದರು.
ಅತಿ ಶೀಘ್ರದಲ್ಲಿಯೇ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಇದೆಲ್ಲ ಸಾಧ್ಯವಾಗದ ಕಾರಣ ಈಗಲೇ ಭರ್ಜರಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈಗ ಎಲ್ಲರ ಮೇಲೂ ನಾವು ನಿಗಾ ಇರಿಸಿದ್ದೇವೆ ಎಂದು ಅವರು ಗುಡುಗಿದರು.
ಆದಾಯಕರ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳಿಗೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನವರ ಮೇಲೆ ದಾಳಿ ನಡೆಸಿ ಎಂದು ಒತ್ತಡ ಹಾಕಲಾಗುತ್ತಿರುವುದೂ ಎಲ್ಲರಿಗೂ ಗೊತ್ತು ಎಂದು ಅವರು ದೂರಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಪರಮಾವಧೀ ತಲುಪಿದ್ದು ಇದರ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ದಿ. ೯ ರಂದು ಮುಂಜಾನೆ ೯ ರಿಂದ ೧೧ ರವರೆಗೆ ಎರಡು ಗಂಟೆಗಳ ಕಾಲ ಎಲ್ಲ ಜಿಲ್ಲೆಗಳಲ್ಲೂ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.ಕಾಂಗ್ರೆಸ್‌ನ ಘೋಷಣೆಯಾದ ೨೦೦ ಯುನಿಟ್ ವಿದ್ಯುತ್ ನೀಡಿಕೆ ಹಾಗೂ ಪ್ರತಿ ಕುಟುಂಬದ ಮಹಿಳೆಗೆ ೨೦೦೦ ರೂ. ನೀಡಿಕೆಗೆ ಹಣ ಎಲ್ಲಿಂದ ಬರುತ್ತದೆ? ಎಂಬ ವಿಷಯ ಕುರಿತು ಪ್ರಸ್ತಾಪಿಸುತ್ತ ಭ್ರಷ್ಟಾಚಾರ ಕಿತ್ತೆಸೆದರೆ ಸಾಕು ಆ ಹಣ ತಾನಾಗೇ ಸಂಗ್ರಹವಾಗುತ್ತದೆ ಎಂದು ಅವರು ಹೇಳಿದರು.ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಈಗಾಗಲೇ ೧೫೦ ಸ್ಥಾನಗಳ ಕುರಿತಂತೆ ಚರ್ಚೆ ಮಾಡಿದ್ದೇವೆ, ನಾಳೆ ದಿ. ೭ ರಂದು ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ಇದೆ, ಯಾರಿಗೆ ಏನು ಕಿವಿಮಾತು ಹೇಳಬೇಕೋ ಹೇಳುತ್ತೇವೆ. ನಂತರ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಎಲ್ಲವೂ ನಿರ್ಧರಿತವಾಗುತ್ತದೆ ಎಂದು ಅವರು ತಿಳಿಸಿದರು.
ರಮೇಶ್ ಜಾರಕಿ ಹೊಳಿ ಹೆಸರನ್ನು ಪ್ರಸ್ತಾಪಿಸದೆ ಡಿಕೆಶಿ ಪರೋಕ್ಷ ವಾಗ್ದಾಳಿ ನಡೆಸಿದರು.