ಭ್ರಷ್ಟಾಚಾರ ಮುಕ್ತ ಗ್ರಾಮವೇ ಫೌಂಡೇಶನ್‍ನ ಪ್ರಮುಖ ಧ್ಯೇಯ: ರವೀಂದ್ರ ಸ್ವಾಮಿ

ಔರಾದ:ಜ.3: ಬುದ್ಧ, ಬಸವ, ಅಂಬೇಡ್ಕರರ ಕನಸಾಗಿರುವ ಕಲ್ಯಾಣ ರಾಜ್ಯ ನಿರ್ಮಿಸುವ ಉದ್ದೇಶ ಪ್ರತಿಯೊಬ್ಬ ಗ್ರಾಮ ಪಂಚಾಯತ್ ಸದಸ್ಯರ ಗುರಿಯಾಗಿರಬೇಕು. ಜನಸೇವೆ ಮತ್ತು ಪ್ರಗತಿ ಗಮನದಲ್ಲಿಟ್ಟುಕೊಂಡು ನೂತನ ಸದಸ್ಯರು ದುಡಿಯಬೇಕು. ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಗ್ರಾಮಕ್ಕಾಗಿ ಏಕತಾ ಫೌಂಡೇಶನ್‍ಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಏಕತಾ ಫೌಂಡೇಶನ್ ಔರಾದ್‍ನ ಅಧ್ಯಕ್ಷರಾದ ರವೀಂದ್ರ ಸ್ವಾಮಿ ನುಡಿದರು.
ಕಮಲನಗರ ತಾಲೂಕಿನ ಹಾಲಹಳ್ಳಿಯ ತ್ರಿಯಂಬಕೇಶ್ವರ ಮಹಾದೇವ ಮಂದಿರದ ಆವರಣದಲ್ಲಿ ಏಕತಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಸಮಾರಂಭ”ವನ್ನು ಉದ್ದೇಶಿಸಿ ಮಾತನಾಡಿದರು.
ಮನುಷ್ಯ ಹುಟ್ಟುವುದು ಸಹಜ, ಸಾಯುವುದು ಖಚಿತ. ಆದರೆ ಈ ಹುಟ್ಟು ಸಾವಿನ ಮಧ್ಯೆ ಮಾಡಿದ ಸೇವೆ ಸದಾ ಶಾಶ್ವತ. ಭ್ರಷ್ಟಾಚಾರ ಮುಕ್ತ ತಾಲೂಕಾ ನನ್ನ ಪರಮ ಧ್ಯೇಯ. ಜನರ ಸಮಸ್ಯೆಗಳನ್ನು ಗಮನವಿಟ್ಟು ಆಲಿಸಬೇಕು. ಜನರನ್ನು ಪ್ರೀತಿಯಿಂದ ಮಾತನಾಡಿಸಬೇಕು. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು. ಎಷ್ಟು ವರ್ಷ ಅಧಿಕಾರದಲ್ಲಿದ್ದೆ ಎನ್ನುವುದು ಮುಖ್ಯವಲ್ಲ. ಜನರಿಗಾಗಿ ಎಷ್ಟು ಕೆಲಸ ಮಾಡಿಸಿದೆ ಎನ್ನುವುದು ಬಹಳ ಮುಖ್ಯ. ಸದ್ಯ ಗೆಲುವು ಸಾಧಿಸಿದ ಭರದಲ್ಲಿ ಸದಸ್ಯರು ಮೈಮರೆತು ಕುಳಿತುಕೊಳ್ಳಬಾರದು. ಅಭಿವೃದ್ಧಿ ಕಡೆಗೆ ಅನುದಿನ ಗಮನ ಹರಿಸಬೇಕು. ಎಲ್ಲಾ ನೂತನ ಸದಸ್ಯರ ಜೊತೆ ತನು ಮನ ಧನದಿಂದ ನಾನು ಬೆನ್ನೆಲುಬಾಗಿ ಸೇವೆ ಮಾಡುವೆ. ಮುಂದಿನ ದಿನಗಳಲ್ಲಿ ತಾಲೂಕಾ ಅಭಿವೃದ್ಧಿಗಾಗಿ ನನ್ನ ಜೊತೆ ಕೈಜೋಡಿಸಿ ಎಂದು ರವೀಂದ್ರ ಸ್ವಾಮಿ ನುಡಿದರು. ಅಲ್ಲದೆ ಗ್ರಾಮದಲ್ಲಿ ಸಾರ್ವಜನಿಕ ಆಸ್ತಿಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಹಗಲು ವಿದ್ಯುತ್ ದೀಪ ಉರಿಯದಂತೆ ನೋಡಿಕೊಳ್ಳಬೇಕು. ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಯಾವುದೇ ಅಭಿವೃದ್ಧಿ ಕೆಲಸದಲ್ಲಿ ಅನುದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಅನುದಾನ ಮಧ್ಯವರ್ತಿಗಳ ಹಾವಳಿಗೆ ಬಲಿಯಾಗದೆ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದೇ ನೂತನ ಸದಸ್ಯರ ಪ್ರಮುಖ ಧ್ಯೇಯವಾಗಿದೆ. ಅದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.
ಹಾಲಹಳ್ಳಿ ಗ್ರಾಮದ ಮುಖಂಡರಾದ ಕಾಶಿನಾಥ ಅವರು ಮಾತನಾಡಿ “1987 ರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನಿಸಿ ಪ್ರೇರಣೆ ನೀಡಿದ್ದರು. ಇಂದು ರವಿಸ್ವಾಮಿಯವರು ಸದಸ್ಯರಿಗೆ ಸನ್ಮಾನಿಸಿ ಗ್ರಾಮದ ಸೇವೆ ಮಾಡಲು ಸ್ಫೂರ್ತಿ ನೀಡುತ್ತಿದ್ದಾರೆ. ಗ್ರಾಮ ಪಂಚಾಯತ್‍ಗೆ ಇಂದು ಸಾಕಷ್ಟು ಅನುದಾನವಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸದಸ್ಯರು ನಾಯಕರಾಗದೆ ಸೇವಕರಾದಾಗ ಮಾತ್ರ ಗ್ರಾಮದ ಪ್ರಗತಿ ಸಾಧ್ಯ. ನೀವು ಎಷ್ಟು ಸಂಪಾದನೆ ಮಾಡಿದ್ದೀರಿ ಎಂದು ಯಾರೂ ಕೇಳಲ್ಲ. ನೀವು ಅಧಿಕಾರದಲ್ಲಿದ್ದಾಗ ಎಷ್ಟು ಅಭಿವೃದ್ಧಿ ಕೆಲಸ ಮಾಡಿಸಿದ್ದೀರಿ ಎನ್ನುವುದು ಜನರ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಆದ್ದರಿಂದ ಸದಸ್ಯರು ನಿಷ್ಪಕ್ಷಪಾತದಿಂದ ಕೆಲಸ ಮಾಡಲು ಅವರಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ರವಿಸ್ವಾಮಿಯವರು ಸನ್ಮಾನ ನೆರವೇರಿಸುತ್ತಿರುವುದು ಅಭಿನಂದನೀಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಗ್ರಾಮದ ಮುಖಂಡರಾದ ನಿವರ್ತಿ ಮಹಾರಾಜರು ಮಾತನಾಡಿ “ರವಿಂದ್ರ ಸ್ವಾಮಿಯವರು ಭಾವೈಕ್ಯತೆಯ ಮೂರ್ತಿಯಾಗಿದ್ದಾರೆ. ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಬಡವರ, ದೀನ ದಲಿತರ ಆಶಾಕಿರಣ, ಯುವಕರ ನೆಚ್ಚಿನ ನಾಯಕರಾಗಿದ್ದಾರೆ. ಏಕತಾ ಫೌಂಡೇಶನ್ ಮೂಲಕ ಸಮಾಜದಲ್ಲಿ ಏಕತೆಯನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಸನ್ಮಾನದ ಮೂಲಕ ಗ್ರಾಮ ಪಂಚಾಯತ್ ಸದಸ್ಯರ ಜವಾಬ್ದಾರಿ ಹೆಚ್ಚುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಫೌಂಡೇಶನ್‍ನ ಅಧ್ಯಕ್ಷರಾದ ಶ್ರೀ ರವೀಂದ್ರ ಸ್ವಾಮಿಯವರು ಕಮಲನಗರ ಹಾಗೂ ಔರಾದ ತಾಲೂಕಿನ 39 ಗ್ರಾಮ ಪಂಚಾಯತ್ ಸದಸ್ಯರುಗಳನ್ನು ವಿನಯ ಮತ್ತು ಗೌರವದಿಂದ ಸನ್ಮಾನಿಸಿದರು. ಕೆಲವು ಸದಸ್ಯರು ಮೂರು ಬಾರಿ ಗೆಲುವು ಸಾಧಿಸಿದವರಿದ್ದರು. ಇನ್ನೂ ಕೆಲವರು ಕೇವಲ ಒಂದೇ ಮತದಿಂದ ಗೆಲುವು ಸಾಧಿಸಿದ ಸದಸ್ಯರು ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ಬೀದರನ ಯುವ ಉದ್ಯಮಿಗಳಾದ ಶ್ರೀ ಗಿರೀಶ ಸಿಂಧೆಯವರು ರವೀಂದ್ರ ಸ್ವಾಮಿ ಹಾಗೂ ದೀಪಕ್ ಪಾಟೀಲ ಚಾಂದೋರಿಯವರನ್ನು ಸನ್ಮಾನಿಸಿದರು. ಬಿ ಬ್ಲೂ ನೃತ್ಯ ತಂಡದವರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆ ಮೇಲೆ ಸಂಭಾಜಿ ಬ್ರಿಗೇಡ್ ಅಧ್ಯಕ್ಷರಾದ ಸತೀಷ ವಾಸರೆ, ಪ್ರಮುಖರಾದ ನಾರಾಯಣ ಪಾಟೀಲ, ಕಾಶಿನಾಥ ಜೀರ್ಗೆ, ಧನಾಜಿ ಕಾಂಬಳೆ, ಗಿರೀಶ ಸಿಂಧೆ, ದೀಪಕ್ ಪಾಟೀಲ ಚಾಂದೋರಿ, ಸುಭಾಷ ಔಕಾರ್, ತೇಜಿನಾಥ ಮೂಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.