ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಗುರಿ

ಕೋಲಾರ,ಏ,೨೪-ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಬೇಕಾಗಿತ್ತು, ಆದರೆ ಕಾರಣಾಂತರಗಳಿಂದ ಅವರ ಸ್ಪರ್ಧೆ ಸಾಧ್ಯವಾಗಲಿಲ್ಲ, ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಅಭಿವೃದ್ಧಿಯ ಆಶ್ವಾಸನೆಗಳನ್ನು ನಾನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲೂಕಿನ ವಕ್ಕಲೇರಿ ಹಾಗೂ ನರಸಾಪುರ ಹೋಬಳಿ ವ್ಯಾಪ್ತಿಯ ಸುಮಾರು ೨೦ ಗ್ರಾಮಗಳಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿ, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದ್ದರೆ ಕೆಸಿ ವ್ಯಾಲಿ ಮೂರನೇ ಹಂತದ ಶುದ್ದೀಕರಣ, ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಮೆಡಿಕಲ್ ಕಾಲೇಜು, ಟಮೋಟ ಮತ್ತು ಮಾವು ಸಂಸ್ಕರಣಾ ಘಟಕ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು ಅವರು ಹೇಳಿದ್ದ ಅಷ್ಟು ಆಶ್ವಾಸನೆಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡಿಸಲಾಗುವುದು ಎಂದರು.
ಸಹಾಯ ಅಂತ ಬಂದವರಿಗೆ ಆದ್ಯತೆ ನೀಡುವುದು ನನ್ನ ವ್ಯಕ್ತಿತ್ವವಾಗಿದ್ದು ನನ್ನ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಗುರಿಯಾಗಿದೆ ಕೋಲಾರ ವಿಧಾನಸಭಾ ಕ್ಷೇತ್ರದ ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.
ಎಂಎಲ್ಸಿ ನಜೀರ್ ಅಹಮದ್ ಹಿರಿಯ ದಲಿತ ಮುಖಂಡ ಸಿ.ಎಂ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೋಚಿಮುಲ್ ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ ಇತರರು ಇದ್ದರು.