ಭ್ರಷ್ಟಾಚಾರ ಬಯಲಿಗೆಳೆಯುವ ಕಾರ್ಯ ಕೇವಲ ಪತ್ರಿಕೆಗಳಿಂದ ಸಾಧ್ಯ: ರಾಜಶೇಖರ ಪಾಟೀಲ

ಬೀದರ್: ಜು.26:ಭ್ರಷ್ಟಾಚಾರ ಬಯಲಿಗೆಳೆಯುವ ಕಾರ್ಯ ಕೇವಲ ಪತ್ರಿಕೆಗಳಿಂದ ಸಾಧ್ಯ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
ಹುಮನಾಬಾದ ಪಟ್ಟಣದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸನ್ಮಾರ್ಗದ ದಾರಿ ತೋರುತ್ತಿವೆ. ಮಾಧ್ಯಮಗಳು ಸಾಕಷ್ಟು ಸಮಸ್ಯೆಗಳ ಮಧ್ಯೆಯೂ ವಾಸ್ತವಿಕತೆ ಬಿಂಬಿಸುವ ಮೂಲಕ ಬಡವರು, ಸೌಲಭ್ಯ ವಂಚಿತರು, ಶೋಷಿತರ ಪರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಮಾಜ ಸುಧಾರಣೆಯಾಗಲು ಪತ್ರಕರ್ತರ ಜೊತೆಗೆ ಸ್ಥಳೀಯರು ಕೈಜೋಡಿಸಿದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತ ಬಂದಿದೆ. ಸ್ವಸ್ಥ ಹಾಗೂ ಸಧೃಡ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವುದರ ಜೊತೆಗೆ ವಾಸ್ತವ ಹಾಗೂ ವಸ್ತುನಿಷ್ಠ ಸಂಗತಿಗಳನ್ನು ಸಾಮಾನ್ಯರಿಗೆ ತಲುಪಿಸಿ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ ಎಂದು ತಿಳಿಸಿದರು.
ಪತ್ರಿಕಾ ಭವನ ಕಾರ್ಯಕ್ಕೆ ಬೇಡಿಕೆ ಹಿನ್ನಲೆ ಇಗಾಗಲೆ ನಿವೇಶನ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಡತ ಇದ್ದು, ಶಿಘ್ರದಲ್ಲೆ ಪತ್ರಿಕಾ ಭವನಕ್ಕೆ ನಿವೇಶನ ಜೊತೆಗೆ ಕಟ್ಟಡಕ್ಕೆ ಭೇಕಾದ ಅನುದಾನ ಸಹಿತ ನೀಡಲಾಗುವುದು ಎಂದು ಇದೆ ಸಂಧರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ‘ಮಂಗಳೂರು ಸಮಾಚಾರ’ದಿಂದ ಆರಂಭವಾದ ಕನ್ನಡ ಪತ್ರಿಕೆಗಳು ಇಂದು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಕೈ ಸೇರುತ್ತಿವೆ. ಬೆರಳೆಣಿಕೆಯ ಸೀಮಿತವಾಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಯಾದಿ ಇಂದು ಇನ್ನೂರಕ್ಕೂ ತಲುಪಿದೆ. ಈ ಎಲ್ಲ ಪತ್ರಕರ್ತರ ಆರೋಗ್ಯ ಹಿತ ಕಾಪಾಡಲು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಕಾರ್ಡ್ ವಿತರಿಸಲು ಅಲ್ಲಿಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ ಮುಂದಾಗಿರುವುದು ಇಡಿ ನಾಡಿಗೆ ಮಾದರಿ ಕ್ರಮವಾಗಿದೆ. ಬೀದರ್ ಜಿಲ್ಲೆಯಲ್ಲಿ ನಿರ್ಮಾಣವಾದ ಪತ್ರಿಕಾ ಭವನ ಮಾದರಿಯಲ್ಲಿ ಹುಮ್ನಾಬಾದ್ ತಾಲ್ಲೂಕಿನಲ್ಲೂ ಸಹ ಸುಸಜ್ಜಿತ ಭವನ ನಿರ್ಮಾಣಕ್ಕೆ ಇಲ್ಲಿಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಂದಾಗಬೇಕೆಂದು ಕರೆ ನೀಡಿದರು.
ವೀರ ರೇಣೂಕ ಸಂಸ್ಥಾನದ ಅಧಿಪತಿ ಪೂಜ್ಯ ಷ.ಬ್ರ ಗಂಗಾಧರ ಶಿವಾಚಾರ್ಯರು ಮಾತನಾಡಿ, ಪತ್ರಕರ್ತರಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪತ್ರಿಕಾ ದಿನಾಚರಣೆ ಬಹಳ ಮಹತ್ತರ ಕಾರ್ಯ ಮಾಡುತ್ತಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ದುರ್ಯೋಧನ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಳಂದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಣಮಂತ ಶೇರಿ ವಿಷೇಶ ಉಪನ್ಯಾಸ ನೀಡಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪ್ರಾಭಾರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೋವಿಂದ, ಪುರಸಭೆ ಅಧ್ಯಕ್ಷೆ ನೀತು ಶರ್ಮಾ ಸೇರಿದಂತೆ ಅನೇಕರು ಇದ್ದರು
ಈ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದುರ್ಯೋಧನ ಹೂಗಾರ, ಶೈಲೇಂದ್ರ ಕಾವಡಿ, ಸಂಜುಕುಮಾರ ಜುನ್ನಾ, ರಮೇಶ ರೆಡ್ಡಿ, ದಿಲೀಪಕುಮಾರ ಮೇತ್ರೆ, ವೆಂಕಟೇಶ ಜಾಧವ, ಸಂಜಯ ದಂತಕಾಳೆ, ಪ್ರಶಾಂತ ಹೊಸಮನಿ, ರಾಜಪ್ಪಾ ಪೂಜಾರಿ, ಗುಂಡು ಅತಿವಾಳ, ಸೈಯದ್ ರಿಜ್ವಾನ್, ಶಿವಶರಣ ಚಾಂಗಲೇರಾ, ಅರವಿಂದ ಪಾಟೀಲ್ ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಆರಂಭದಲ್ಲಿ ರಾಜಕುಮಾರ ಪೂಜಾರಿ ಸ್ವಾಗತಿಸಿದರು. ಶರವಣ ನಾರಾಯನ್ ಪೇಟ್ ಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟ ಜಾಧವ್ ವಂದಿಸಿದರು.