ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ

ಕಲಬುರಗಿ: ನ.6:ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಪಿಡುಗಾಗಿ ಕಾಡುತ್ತಿರುವ ಭ್ರಷ್ಟಾಚಾರವೆಂಬ ಹೆಮ್ಮರವನ್ನು ಬೇರು ಸಹಿತ ಕಿತ್ತೊಗೆಯಬೇಕಾದರೆ ಲೋಕಾಯುಕ್ತ ಮತ್ತು ಕೆಲವು ವ್ಯಕ್ತಿಗಳ ಹೋರಾಟದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಬದಲಿಗೆ ಪ್ರತಿಯೊಬ್ಬರು ಇದರ ನಿರ್ಮೂಲನೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದು ತುಂಬಾ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ನ್ಯೂ ರಾಘವೇಂದ್ರ ಕಾಲಿನಿಯಲ್ಲಿರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಭ್ರಷ್ಟಾಚಾರ ವಿರೋಧಿ ಸಪ್ತಾಹ ಆಚರಣೆ’ಯ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಬೋಧಿಸಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರ ನಿರ್ಮೂಲನೆ ಭಾಷಣದಿಂದ ಬಗೆಹರಿಯದೆ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತಿ ಅವಶ್ಯಕ. ಯಾವುದೇ ಒಬ್ಬ ವ್ಯಕ್ತಿ ಹುದ್ದೆ ದೊರೆಯುವುದಕ್ಕಿಂತ ಮುಂಚೆ ಆದರ್ಶ ಮಾತುಗಳನ್ನಾಡಿ, ಹುದ್ದೆ ದೊರೆತ ನಂತರ ಗಾಳಿಗೆ ತೂರುವ ಪ್ರವೃತ್ತಿ ಬೇಡ. ಭೃಷ್ಟಾಚಾರ ಎಂಬುದು ಕೆಲವೇ ಕ್ಷೇತ್ರಕ್ಕೆ ಸೀಮಿತವಾಗದೆ, ವ್ಯಾಪಕವಾಗಿ ಕಂಡುಬರುತ್ತದೆ. ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಜಾಗೃತಿಯನ್ನು ವಹಿಸಿ, ಇದನ್ನು ನಾಶಪಡಿಸಲು ಕಾರ್ಯನಿರ್ವಹಿಸಬೇಕಾಗಿದೆ ಎಂದು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದರು.

    ಸಂಸ್ಥೆಯ ಮುಖ್ಯಸ್ಥ ಸಿವಕುಮಾರ ಮುತ್ತಾ ಮಾತನಾಡಿ, ಭ್ರಷ್ಟಾಚಾರ ಎಂಬುದು ಮನುಕುಲವನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಶ್ರೀಮಂತರು ಶ್ರೀಮಂತರಾಗಿಯೇ ಮತ್ತು ಬಡವರು ಬಡವರಾಗಿಯೇ ಉಳಿದಿದ್ದಾರೆ. ಈ ಪಿಡುಗಿನಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಸಾಕಷ್ಟು ಶೋಷಣೆಯಾಗುತ್ತಿದೆ. ಅಲ್ಲದೇ ಪ್ರತಿಭಾವಂತರು ಕೂಡಾ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಚಂದ್ರಶೇಖರ ವೈ.ಶಿಲ್ಪಿ, ಪ್ರವೀಣ ಬಡಿಗೇರ್, ಅಭಿಜೀತ ವಿಶ್ವಕರ್ಮ, ರಕ್ಷಿತ್, ಪ್ರಥಮ್, ಆದಿತ್ಯ, ಶೃದ್ಧಾ, ಸಮೃದ್ಧಿ, ಪ್ರತೀಜ್ಞಾ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.