ಭ್ರಷ್ಟಾಚಾರ ತಡೆಗೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ,ಆ1: ಹು-ಧಾ ಮಹಾನಗರ ಪಾಲಿಕೆಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ನಗರದ ಮಿನಿ ವಿಧಾನಸೌಧ ಆವರಣದಲ್ಲಿಂದು ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮೊನ್ನೆ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತರೂಢ ಬಿಜೆಪಿ ಪಾಲಿಕೆ ಸದಸ್ಯರೇ ಪಾಲಿಕೆಯಲ್ಲಿನ ಭ್ರಷ್ಟಾಚಾರ ಬಯಲಿಗೆ ಎಳೆದಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಪಾಲಿಕೆ ಮೇಯರ್ ಸೂಕ್ತ ಕ್ರಮ ಜರುಗಿಸುವ ಮೂಲಕ ಪಾಲಿಕೆಯಿಂದ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು. ಪಾಲಿಕೆ ಹಾಗೂ ಹು-ಧಾ ಮಹಾನಗರ ಸೇವೆಯನ್ನು ಪ್ರಮಾಣಿಕವಾಗಿ ಕಾರ್ಯನಿರ್ವಾಹಿಸುವ ಅಧಿಕಾರಿಗಳ ಅವಶ್ಯಕತೆ ನಮಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಗಾವಹಿಸಬೇಕು ಒತ್ತಾಯಿಸಿದರು.
ಪಾಲಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ ಎಂದು ಹೇಳುವ ಮೂಲಕ ಕಾರ್ಯನಿರ್ವಹಿಸುವ ಅಧಿಕಾರಿಗಳೇ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಿ ಪ್ರತಿಯೊಂದು ಕೆಲಸಕ್ಕೆ ಹಣ ವಸೂಲಿ ಮಾಡುತ್ತಿದ್ದು, ಅನ್ಯಾಯವಾಗಿದೆ ಎಂದು ದೂರಿದರು.
ಈ ಭ್ರಷ್ಟಾಚಾರ ನಿಗ್ರಹ ಮಾಡಲು ಪಾಲಿಕೆ ಮೇಯರ್ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದೇ ಹೋದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅನಂತಕುಮಾರ್ ಬುಗಡಿ, ವಿಕಾಸ್ ಸೊಪ್ಪಿನ, ನವೀನ್ ರಜಪೂತ್, ಮೆಹಬೂಬ್, ಸುನಂದಾ ಕರಡಿಗುಡ್ಡ, ಪ್ರತಿಬಾ ದಿವಾಕರ್, ಡೆನಿಯಲ್ ಐಕೋಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.