ಭ್ರಷ್ಟಾಚಾರಮುಕ್ತ ಭಾರತ  ಎಎಪಿ ಧ್ಯೇಯ – ನಾರಿ ಶ್ರೀನಿವಾಸ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ.21 :- ದೇಶದಲ್ಲಿ ಆಡಳಿತ ನಡೆಸುವ ಪಕ್ಷಗಳು ಲಂಚವೆಂಬ ಭ್ರಷ್ಟಾಚಾರದಲ್ಲಿ ತೊಡಗಿದ್ದು ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ  ದೇಶದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯದಲ್ಲಿ   ಎಎಪಿ ಪಕ್ಷ ಅಧಿಕಾರಕ್ಕೆ ಬಂದಿದ್ದು ರಾಜ್ಯದಲ್ಲಿ ಸಹ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಕೂಡ್ಲಿಗಿ ಕ್ಷೇತ್ರದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮೂಲಕ ರಾಜ್ಯದಲ್ಲಿ ಅಮ್ ಆದ್ಮಿ ಪಕ್ಷದ ಧ್ಯೇಯವಾಗಿದೆ ಎಂದು ಕೂಡ್ಲಿಗಿ ಕ್ಷೇತ್ರದ ಅಮ್ ಆದ್ಮಿ ಪ್ರಬಲ ಸೇವಾಕಾಂಕ್ಷಿ ಅಭ್ಯರ್ಥಿ  ನಾರಿ ಶ್ರೀನಿವಾಸ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಪಕ್ಷದ  ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ  ಮಾತನಾಡುತ್ತಾ ಬಡವರು ಹಿತ ಕಾಯುವುದರ ಜತೆಗೆ ಭ್ರಷ್ಟಾಚಾರಮುಕ್ತ ಆಡಳಿತವನ್ನು ಕ್ಷೇತ್ರದಲ್ಲಿ ಆಡಳಿತ ನಡೆಸುವ ಗುರಿಯನ್ನು ಆಮ್ ಆದ್ಮಿ ಪಕ್ಷ ಹೊಂದಿದೆ ಎಂದು ಎಎಪಿ ಅಭ್ಯರ್ಥಿ ನಾರಿ ಶ್ರೀನಿವಾಸ ತಿಳಿಸಿದರು.
ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಬಡವರು, ಮಹಿಳೆಯರು ಸೇರಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಉತ್ತಮವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದಂತೆ ಕೂಡ್ಲಿಗಿ ಕ್ಷೇತ್ರದಲ್ಲೂ ಜನರ ಪರವಾದ ಆಡಳಿತ ನಡೆಸಲಾಗುವುದು ಎಂದರಲ್ಲದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳಿದ್ದರೂ ವೈದ್ಯರ ಕೊರತೆ ಕಾಡುತ್ತಿದೆ. ಶಾಲೆಗಳಿದ್ದರೂ ಶಿಕ್ಷಕರಿಲ್ಲ. ಇಂಥ ಹತ್ತಾರು ಸಮಸ್ಯೆಗಳಿದ್ದರೂ ಈ ಬಗ್ಗೆ ಈವರೆಗಿನ ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ. ಇದರಿಂದ ಬಡವರಿಗೆ ಆರ್ಥಿಕ ಹೊರೆಯಾಗಲಿದೆ ಎಂದು ತಿಳಿಸಿದರು.
ಎಎಪಿ ವಿಜಯನಗರ ಜಿಲ್ಲಾ ಅಧ್ಯಕ್ಷ ಕಾಳಿದಾಸ ಮಾತನಾಡಿ, ಕೂಡ್ಲಿಗಿ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅನೇಕ ಮುಖಂಡರು ಎಎಪಿ ತತ್ವ, ಸಿದ್ಧಾಂತ ಒಪ್ಪಿ ಪೊರಕೆಯ ಬಾವುಟ ಹಿಡಿಯಲು ಮುಂದಾಗಿದ್ದಾರೆ ಅಲ್ಲದೆ ಭ್ರಷ್ಟಾಚಾರದಿಂದ ತೊಡಗಿರುವ ಆಡಳಿತ ಪಕ್ಷದ ಅಧಿಕಾರಕ್ಕೆ ಬೇಸತ್ತು ಎಎಪಿ ಪಕ್ಷವನ್ನು ಬೆಂಬಲಿಸಿ ಮುಂಬರುವ ದಿನಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸಂಶಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿ ತಾಲೂಕು ಅಧ್ಯಕ್ಷ  ರಘುನಾಯ್ಕ, ಮುಖಂಡರಾದ ಸಿದ್ದಾಪುರ ಶಾಂತವೀರಪ್ಪ, ಸಿದ್ಧಲಿಂಗೇಶ ಮುತ್ತಾಳ್ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಾರಕಬಾವಿ ಕೋಟೇಶ್, ಹೊಸಪೇಟೆ ಮದೀನ್, ಕಮಲ್ , ಸಂಧ್ಯಾರಾಣಿ, ಸಚಿಕೇತ್ ಸೇರಿ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಎಎಪಿ ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿ ನಾರಿ ಶ್ರೀನಿವಾಸ ನೇತೃತ್ವದಲ್ಲಿ ಪಟ್ಟಣದ ಎಎಪಿ ಕಚೇರಿಯಿಂದ ಗುಡೇಕೋಟೆ ರಸ್ತೆಯ ಬಸವೇಶ್ವರ, ಅಂಬೇಡ್ಕರ್, ಮದಕರಿ ವೃತ್ತದ ಮೂಲಕ ಕೊಟ್ಟೂರು ರಸ್ತೆ, ಹಳೇ ಸಂತೆ ಮೈದಾನದಿಂದ ವಾಸವಿ ಕಲ್ಯಾಣ ಮಂಟಪದವರೆಗೆ ಬೈಕ್ ರ್ಯಾಲಿ ನಡೆಸಲಾಯಿತು. ತಾಲೂಕಿನ ನಾನಾ ಹಳ್ಳಿಗಳಿಂದ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.