
ಹುಬ್ಬಳ್ಳಿ, ಆ.೧೫: ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಲು ಬಿಜೆಪಿಯವರಿಗೆ ನೈತಿಕತೆಯಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೪೦% ಭ್ರಷ್ಟಾಚಾರಕ್ಕೆ ಬಿಜೆಪಿಯವರು ಇದುವರೆಗೂ ಉತ್ತರ ಕೊಡಲಿಲ್ಲ, ಇದರಿಂದಾಗಿ ಜನಮನ್ನಣೆ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿಯವರು ೧೨೦ ಸ್ಥಾನಗಳಿಂದ ೬೦ ಸ್ಥಾನಗಳಿಗೆ ಇಳಿದಿದ್ದು, ಇದು ಭ್ರಷ್ಟಾಚಾರದ ವಿರುದ್ಧದ ಜನರ ಆಕ್ರೋಶವಾಗಿದೆ ಎಂದು ಅವರು ನುಡಿದರು.
ಕಾಂಗ್ರೆಸ್ ಶಾಸಕರು ವಸೂಲಿಗೆ ಇಳಿದಿದ್ದಾರೆ ಎಂಬ ಮಾಜಿ ಸಚಿವ ಸಿ.ಟಿ, ರವಿಯವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಸಿ.ಟಿ. ರವಿ ಸತ್ಯ ಹರಿಶ್ಚಂದ್ರರೇನೂ ಅಲ್ಲ ಎಂದವರು ಹೇಳಿದರು.
ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿರುತ್ತದೆ, ಅದನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶೆಟ್ಟರ್ ನುಡಿದರು.