ಭ್ರಷ್ಟಾಚಾರದ ದುರುದ್ದೇಶದಿಂದ ಕಚೇರಿ ಸ್ಥಳಾಂತರಕ್ಕೆ ನಕಾರ

ತಿ.ನರಸೀಪುರ: ಸೆ.07:- ತಾಲೂಕಿನ ಹಲವು ಇಲಾಖೆಗಳ ಅಧಿಕಾರಿಗಳು ಭ್ರಷ್ಟಾಚಾರ ಎಸಗುವ ದುರುದ್ದೇಶದಿಂದ ತಮ್ಮ ಕಚೇರಿಗಳನ್ನು ತಾಲೂಕು ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ ಮೂರ್ತಿ ಆರೋಪಿಸಿದರು.
ಪಟ್ಟಣದ ಮಿನಿವಿಧಾನಸೌಧದ ಮುಂದೆ ಜಿಲ್ಲಾ ದಸಂಸದ ವತಿಯಿಂದ ಕಚೇರಿಗಳ ಸ್ಥಳಾಂತರಕ್ಕೆ ಪ್ರತಿಭಟನೆ ನಡೆಸಿದರು. ತಾಲೂಕಿನ ಎಲ್ಲ ಇಲಾಖೆಗಳನ್ನು ತಾಲೂಕು ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.
12 ಕೋಟಿರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕು ಕಚೇರಿ ಸಂಕೀರ್ಣ ಕಳೆದ 7 ವರ್ಷಗಳ ಹಿಂದೆಯೇ ಕಾರ್ಯಾರಂಭ ಮಾಡಿದೆ. ಆದರೆ, ಲಂಚಗುಳಿತಕ್ಕೆ ಬಲಿಯಾಗಿರುವ ತಾಲೂಕಿನ ಅಬಕಾರಿ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆಗಳು ಮತ್ತು ಹಲವು ಇಲಾಖೆಗಳು ಖಾಸಗಿ ವ್ಯಕ್ತಿಗಳಿಗೆ ಹಣಮಾಡಿಕೊಡುವ ಉದ್ದೇಶದಿಂದ ತಮ್ಮ ಕಛೇರಿಗಳನ್ನು ಸ್ಥಳಾಂತರ ಮಾಡಲು ಹಿಂದೇಟು ಹಾಕುತ್ತಿವೆ ಎಂದು ಕಿಡಿಕಾರಿದರು.
ಮಿನಿ ವಿಧಾನಸೌಧದಲ್ಲಿ ಹಲವುಕೊಠಡಿಗಳು ಖಾಲಿದ್ದರೂ ಸಹ ಕಚೇರಿ ಸ್ಥಳಾಂತರಗಳನ್ನು ಸ್ಥಳಾಂತರ ಮಾಡದೆ ಖಾಸಗಿ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಇಲಾಖೆಗಳು ಕಳೆದ 15 ವರ್ಷಗಳಿಂದ ಮಾಸಿಕ 15 ಸಾವಿರಕ್ಕೂ ಹೆಚ್ಚುಬಾಡಿಗೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವ ಮುಖೇನ ಸರ್ಕಾರದ ಬೊಕ್ಕಸಕ್ಕೆನಷ್ಟ ಉಂಟು ಮಾಡುತ್ತಿವೆ ಎಂದು ಆರೋಪಿಸಿದರು.
ಹಲವು ಇಲಾಖೆಗಳು ತಾಲೂಕು ಕಚೇರಿ ಸಂಕೀರ್ಣಕ್ಕೆ ಮುಂದಿನ 10-15 ದಿನಗಳಲ್ಲಿ ಕಚೇರಿ ಸ್ಥಳಾಂತರ ಮಾಡದಿದ್ದಲ್ಲಿ ದಸಂಸವು ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆಯ ಎದುರು ದಸಂಸ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಗೆಜ್ಜಿಗನಹಳ್ಳಿ ಜಯರಾಮ, ಕೆಂಪರಾಜು, ಮೂಗೂರು ಚೇತನ್, ಪ್ರತಾಪ್, ಮಹದೇವಸ್ವಾಮಿ, ಕುಮಾರ್, ನಾರಾಯಣ, ಮಹದೇವಸ್ವಾಮಿ, ಮಲ್ಲಯ್ಯ ಇತರರು ಹಾಜರಿದ್ದರು.