ಭ್ರಷ್ಟಾಚಾರದ ಆರೋಪ: ಓಲೆಕಾರ ದಾಖಲೆಗಳನ್ನು ನೀಡಲಿ-ಸಿ.ಎಂ.

ಹುಬ್ಬಳ್ಳಿ, ಏ15: ತಮ್ಮ ವಿರುದ್ಧ ನೆಹರೂ ಓಲೆಕಾರ ಮಾಡುತ್ತಿರುವ ನೀರಾವರಿ ಯೋಜನೆಯಡಿಯಲ್ಲಿನ ಸಾವಿರಾರು ಕೋಟಿ ರೂ. ಭ್ರಷ್ಟಾಚಾರದ ಆರೋಪ ಕುರಿತಂತೆ ಓಲೆಕಾರ ದಾಖಲೆಗಳನ್ನು ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇ ಹಗರಣದಲ್ಲಿ ಓಲೆಕಾರಗೆ ಶಿಕ್ಷೆಯಾಗಿದೆ ಎಂಬುದನ್ನು ಮರೆಯದಿರಲಿ ಎಂದು ತಿರುಗೇಟು ನೀಡಿದರು.
ಆರೋಪದಲ್ಲಿ ಹುರುಳಿಲ್ಲ:
ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದ ಅವರು ನಾವು ಹಾಗೂ ಶೆಟ್ಟರ್ ಬಹಳ ಆತ್ಮೀಯರು, ಯಾವುದೇ ಕಾರಣಕ್ಕೂ ಅಂಥ ಕೆಲಸ ಮಾಡುವುದಿಲ್ಲ ಎಂದು ನುಡಿದರು.
ಶೆಟ್ಟರ್‍ರಿಗೆ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ನಡ್ಡಾ ಅವರೊಂದಿಗೆ ನಿನ್ನೆ ಧರ್ಮೇಂದ್ರ ಪ್ರಧಾನ್ ಜೊತೆ ಮಾತನಾಡಿದ್ದೇನೆ, ಬಿಜೆಪಿಗೆ ಅತ್ಯಂತ ನಿಷ್ಠರಾದ ಶೆಟ್ಟರ್ ಅವರ ಮನೆತನ ಜನಸಂಘ ಕಾಲದ್ದು, ಉತ್ತರ ಕರ್ನಾಟಕ ಭಾಗಕ್ಕೆ ಶೆಟ್ಟರ್ ಅತ್ಯಂತ ಅವಶ್ಯಕವಾಗಿದ್ದಾರೆ ಅವರನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಬೊಮ್ಮಾಯಿ ತಿಳಿಸಿದರು.
ಪ್ರತಿಶತ 63 ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿ ಗೊಂದಲವಿದೆ. ಇದೇ ಕಾಂಗ್ರೆಸ್‍ಗೆ ಪ್ಲಸ್ ಪಾಯಿಂಟ್ ಎಂಬ ಡಿಕೆಶಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸುತ್ತ, ಇದು ಕಾಂಗ್ರೆಸ್‍ನವರಿಗೆ ಸ್ವಂತ ಶಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕಟಕಿಯಾಡಿದ ಸಿಎಂ, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಶೀಘ್ರವೇ ಅಂದರೆ ಇನ್ನೆರಡು ಮೂರು ದಿನಗಳಲ್ಲಿ ಎಲ್ಲವೂ ತಿಳಿಯಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.
ಚುನಾವಣೆ ಎಂದರೆ ಒಂದು ಸವಾಲು, ನನ್ನ ಮೊದಲ ಚುನಾವಣೆಯಲ್ಲಿಯೂ ಸೋಲು ಎಂದು ಬರೆದಿದ್ದರು, ಆದರೆ ಅದು ಸುಳ್ಳಾಗಿದೆ ನಾನು ಗೆದ್ದು ಬಂದಿದ್ದೇನೆ ಎಂದ ಅವರು ಇಂದು ಶಿಗ್ಗಾಂವಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.