ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿಗೆ ಮುತ್ತಿಗೆ: ಸೈಬಣ್ಣ ಜಮಾದಾರ್ ಎಚ್ಚರಿಕೆ

ಕಲಬುರಗಿ,ಸೆ.11: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದಲ್ಲಿ ಆಗಿರುವ ಅವ್ಯವಹಾರದ ಕುರಿತು ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದರೂ ಸಹ ಭ್ರಷ್ಟರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಶ್ರೀರಕ್ಷೆ ನೀಡುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಸೆಪ್ಟೆಂಬರ್ 17ರಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಅಹಿಂದ್ ಚಿಂತಕರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೈಬಣ್ಣಾ ಜಮಾದಾರ್ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂನ್ 12 ಮತ್ತು ಜೂನ್ 14ರಂದು ತನಿಖೆ ಮಾಡಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೂ ಸಹ ಸರ್ಕಾರವು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ 2013ರಲ್ಲಿ 371(ಜೆ) ಕಲಂ ಜಾರಿಗೆ ತರುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಸಾವಿರಾರು ಕೋಟಿ ರೂ.ಗಳ ಅನುದನ ಸಹ ಒದಗಿಸಲಾಗಿತ್ತು. ಆದಾಗ್ಯೂ, ಅಕ್ರಮ, ಕಳಪೆ ಕಾಮಗಾರಿಗಳು, ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅನುದಾನ ಲೂಟಿ ಮಾಡಲಾಗಿದೆ. ಅಂತಹ ಲೂಟಿಕೋರರರಿಗೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಶ್ರೀರಕ್ಷೆಯಾಗಿ ನಿಂತಿದ್ದಾರೆ ಎಂದು ಅವರು ವಿಷಾಧಿಸಿದರು.
ಶೇಕಡಾ 40ರಷ್ಟು ಕಮೀಷನ್ ಸರ್ಕಾರವೆಂದು ಬಿಜೆಪಿ ಸರ್ಕಾರದ ವಿರುದ್ಧ ಪ್ರಚಾರ ಮಾಡಿದ ಈಗಿನ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಜನರನ್ನು ಮೆಚ್ಚಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅವ್ಯವಹಾರಗಳ ಕುರಿತು ತನಿಖಾ ತಂಡ ರಚಿಸಿ ತನಿಖೆ ಮಾಡಿ ತಿಂಗಳು ಕಳೆದಿವೆ. ಆದಾಗ್ಯೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಭ್ರಷ್ಟರನ್ನು ರಕ್ಷಿಸಲಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ ಎಂದು ಅವರು ದೂರಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಮಾಡಲು ಹೊರಟಿರುವ ಮಂಡಳಿಗೆ ದುಂದು ವೆಚ್ಚ ಮಾಡದೇ ಈಗಾಗಲೇ ಕಳೆದ ವರ್ಷ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಮಾಡಿ 3.69 ಕೋಟಿ ರೂ.ಗಳನ್ನು ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಮಾಡಿ 11.54 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ತನಿಖಾ ವರದಿಯ ಪ್ರಕಾರ ಮಂಡಳಿಯ 50 ಕೋಟಿ ರೂ.ಗಳ ಬಡ್ಡಿ ಹಣದಲ್ಲಿ ಸರ್ಕಾರದ ಆದೇಶದ ವಿರುದ್ಧ ಕಲ್ಯಾಣ ಕರ್ನಾಟಕ ಉತ್ಸವಕ್ಕೆ 11.54 ಕೋಟಿ ರೂ.ಗಳನ್ನು ವೆಚ್ಚ ಮಾಡಿರುವುದು ಸ್ಪಷ್ಟವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಐದು ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದ್ದು, ಕಾರ್ಯದರ್ಶಿಗಳು ಒಟ್ಟು 951 ನೀರಿನ ಘಟಕಗಳಿಗೆ ತಲಾ 2 ಲಕ್ಷ ರೂ.ಗಳಂತೆ ಹೆಚ್ಚುವರಿ ಹಣ ಸಂದಾಯ ಮಾಡಿ 17.22 ಕೋಟಿ ರೂ.ಗಳನ್ನು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದು, ಕೂಡಲೇ ಅವರಿಗೆ ಅಮಾನತ್ತು ಮಾಡಬೇಕು ಎಂದು ಅವರು ಆಗ್ರಹಿಸಿದರು.
2021-2022ನೇ ಸಾಲಿನ ಅಧ್ಯಕ್ಷರ ವಿವೇಚನಾ ನಿಧಿಯಲ್ಲಿ ನಗರದ ಬಿದ್ದಾಪೂರ್ ಮೇಲ್ಸೆತುವೆಯಿಂದ ಹೀರಾಪೂರ್ ಕ್ರಾಸ್‍ದವರೆಗೆ ವರ್ತುಲ ಸರ್ವಿಸ್ ರಸ್ತೆಗೆ ಏಳು ಕೋಟಿ ರೂ.ಗಳನ್ನು ಎಸ್‍ಸಿಪಿ ಹಣ ದುರ್ಬಳಕೆ ಮಾಡಿದ್ದು ಸಾಬೀತಾಗಿದೆ. ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಕಾರ್ಯದರ್ಶಿಗಳು ಐಎಎಸ್ ಮತ್ತು ಕೆಎಎಸ್ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಫಂಡ್‍ನಲ್ಲಿ 18.80 ಲಕ್ಷ ರೂ.ಗಳ ದುರುಪಯೋಗವಾಗಿದೆ. ಸುಮಾರು 300 ಕೋಟಿ ರೂ.ಗಳಲ್ಲಿ 219 ಕೋಟಿ ರೂ.ಗಳ ಅನುದಾನ ದುರುಪಯೋಗವಾಗಿರುವ ಸಂಶಯವಿದ್ದು, ಸಂಘದ ಮಾಜಿ ಕಾರ್ಯದರ್ಶಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬೇಡಿಕೆಗಳು ಈಡೇರದೇ ಹೋದಲ್ಲಿ ಸೆಪ್ಟೆಂಬರ್ 17ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಯಶವಂತರಾವ್, ವಿಜಯಕುಮಾರ್ ಎಸ್., ತಿಪ್ಪಣ್ಣ, ಸಂಜು ಹೊಡಲಕರ್ ಮುಂತಾದವರು ಉಪಸ್ಥಿತರಿದ್ದರು.