ಭ್ರಷ್ಟಚಾರ ಕಡಿವಾಣಕ್ಕೆ ಆಗ್ರಹ

ಮಹದೇವಪುರ,ಅ.೨೯ : ಸಮಾಜದ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕದೇ ಹೋದರೇ ಬಡ,ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಲಿದೆ ಎಂದು ಮಾನವ ಹಕ್ಕುಗಳ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಆರ್.ಮುನಿರಾಜು ತಿಳಿಸಿದರು.
ಕೆಆರ್ ಪುರಂನ ಭಟ್ಟರಹಳ್ಳಿ ಸಮೀಪದ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಆಯೋಜಿಸಿದ್ದ ಭ್ರಷ್ಟಚಾರ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಒಬ್ಬ ಸಾಮಾನ್ಯ ಮನುಷ್ಯ ಸರ್ಕಾರಿ ಕಚೇರಿಗಳಲ್ಲಿ ಆದಾಯ, ಜಾತಿ ಇನ್ನಿತರ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಲಂಚಕೊಟ್ಟರೇ ತತ್ ತಕ್ಷಣ ಪ್ರಮಾಣ ಪತ್ರಗಳು ಸಿಗುತ್ತವೆ. ಸರ್ಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿ ಹಾಗೂ ಹಣವಂತರ ತಾಳಕ್ಕೆ ಕುಣಿಯುತ್ತಾರೆ, ಅವರು ಹೇಳಿದ ಕೆಲಸಗಳು ಬೇಗನೆ ಆಗುತ್ತವೆ. ಸಾಮಾನ್ಯ ಜನರ ಕೆಲಸಗಳು ಆಗುವುದಿಲ್ಲ ಇವುಗಳಿಗೆ ಕಡಿವಾಣ ಹಾಕಬೇಕಿದೆ.
ತಮಗಾದ ಕಷ್ಟಗಳಿಗೆ ಸ್ಪಂದಿಸಿತ್ತಾರೆ ಎಂದು ತಿಳಿದು ಪೊಲೀಸ್ ಠಾಣೆಗೆ ಹೋದರೂ ಕೂಡಾ ಅಲ್ಲಿಯೂ ಸಂತ್ರಸ್ಥರಿಗೆ ಸರಿಯಾದ ನ್ಯಾಯ ದೊರಕುತ್ತಿಲ್ಲ, ಹಣದ ದುರಾಸೆಗೆ ಪ್ರಕರಣಗಳನ್ನೇ ತಿರುಚುವ ಕೆಲಸಗಳು ಠಾಣೆಗಳಲ್ಲಿ ನಡೆಯುತ್ತಿವೆ ಇದು ನಿಜಕ್ಕೂ ಸಮಾಜಕ್ಕೆ ಮಾರಕ ಎಂದರು.
ಇನ್ನೂ ಬೀದಿ ಬದಿಯ ವ್ಯಾಪಾರಿಗಳೂ ಸಹ ನೆಮ್ಮದಿಯಾಗಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ, ಒಂದೊತ್ತಿನ ಆಹಾರವನ್ನು ಗಿಟ್ಟಿಸಿಕೊಳ್ಳಲು ನಾನಾ ಕಷ್ಟಗಳನ್ನು ಅನುಭವಿಸುವಂತಾಗಿದೆ. ಬೀದಿ ಬದಿಯಲ್ಲಿ ತರಕಾರಿ ಮಾಡುವ , ತಳ್ಳುವ ಗಾಡಿಗಳಲ್ಲಿ ಸಣ್ಣ ಸಣ್ಣ ಹೊಟೆಲ್ ನಡೆಸುವವರು ಪ್ರತಿ ದಿನವೂ ಪೊಲಿಸರು , ಕೆಲ ಸರ್ಕಾರಿ ಅಧಿಕಾರಿಗಳಿಗೆ ಹಣ ನೀಡಬೇಕಿದೆ ಇಲ್ಲವಾದರೇ ಅವರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ಜೀವನಕ್ಕಾಗಿ ಸಣ್ಣ ವ್ಯಾಪಾರ ಮಾಡುವ ಜನರಿಗೆ ಇಂತಹ ಕಿರುಕುಳಗಳಾದರೇ ಅವರು ಜೀವನ ನಡೆಸುವುದದಾರೂ ಹೇಗೆ, ಇವೆಲ್ಲಾ ನ್ಯೂನತೆಗಳನ್ನು ಸರಿ ಪಡಿಸಿ ಬಡ ,ಮಧ್ಯಮ ವರ್ಗದ ಜನರ ಬದುಕು ಹಸನಾಗಿಸಬೇಕಿದೆ.
ಈ ಸಂದರ್ಭದಲ್ಲಿ ಎಮ್.ಹೆಚ್ ಚಂದ್ರಶೇಖರ್, ಶಂಕರಪ್ಪ, ರವಿಶಂಕರ್, ಶಿಲ್ಪಾಚಂದ್ರಶೇಖರ್, ಪಂಕಜಾಕ್ಷಿ, ಮಹಾಲಕ್ಷಿ ಸೇರದಂತೆ ಮತ್ತಿತರರು ಹಾಜರಿದ್ದರು.