ಬೀದರ:ಜು.26: ಜನ್ಮ ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವು ಆದರ್ಶಗಳಿಂದ ಬದುಕನ್ನು ಸಮೃದ್ಧಗೊಳಿಸಿಕೊಳ್ಳಬೇಕು. ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಮತ್ತು ಧರ್ಮಾಚರಣೆಯಿಂದ ಬಾಳು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಂಗಳವಾರ ತಾಲೂಕಿನ ಕೊಳಾರ ಕೆ. ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಜರುಗಿದ ಅಧಿಕ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿದರು.
ಬದುಕು ಒಂದು ಸುಂದರ ಮನೆಯ ಕಿಡಕಿ ಇದ್ದಂತೆ. ಕಿಡಕಿ ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು. ಹಾಗೆಯೇ ಮನುಷ್ಯ ಶ್ರಮಪಟ್ಟರೆ ಸುಖ ಇಲ್ಲದಿದ್ದರೆ ದು:ಖ ತಪ್ಪಿದ್ದಲ್ಲ. ಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಪೆಟುಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯುತ್ತದೆ. ನೋವು ಕೊಡುವವರು ಹಾಗೆಯೇ ಇರುತ್ತಾರೆ. ನೋವುಂಡವರು ಜ್ಞಾನಿಗಳಾಗುತ್ತಾರೆ. ಸಂಸ್ಕಾರ ಸಂಸ್ಕøತಿಯ ಆಚರಣೆಯಿಂದ ಜೀವನ ಉಜ್ವಲಗೊಳ್ಳಲು ಸಾಧ್ಯ. ತಿಳಿದು ಬರುವುದು ಜನನ. ತಿಳಿಯದೇ ಬರುವುದು ಮರಣ. ತಿಳಿದು ಬದುಕುವುದೇ ನಿಜವಾದ ಜೀವನ. ವೀರಶೈವ ಧರ್ಮದಲ್ಲಿ ಗುರು ಕೊಟ್ಟ ಇಷ್ಟಲಿಂಗವನ್ನು ಸದಾ ಧರಿಸಿ ಪೂಜಿಸಿದರೆ ಒಂದೇ ಜನ್ಮದಲ್ಲಿ ಜೀವನ್ಮುಕ್ತಿ ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಿಂದ ಈ ಭಾಗದಲ್ಲಿ ಆಧ್ಯಾತ್ಮ ಚಿಂತನಗಳನ್ನು ಜನ ಮನಕ್ಕೆ ಮುಟ್ಟಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಸಂಘಟಕರ ಶ್ರಮ ಸಾರ್ಥಕಗೊಂಡಿದೆ ಎಂದು ಹರುಷ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಒತ್ತಡದಲ್ಲಿ ಸಿಲುಕಿರುವ ಮನುಷ್ಯನಿಗೆ ಮಾನಸಿಕ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಎಲ್ಲರೂ ಬದುಕು ಕಟ್ಟಿಕೊಂಡು ಬಾಳಬೇಕಾಗುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳು 3 ದಿನಗಳ ಕಾಲ ಲೋಕ ಕಲ್ಯಾಣಕ್ಕಾಗಿ ಕೈಗೊಂಡ ಇಷ್ಟಲಿಂಗ ಪೂಜಾ ಕಾರ್ಯ ಎಲ್ಲ ಭಕ್ತರಿಗೆ ಸಂತೋಷ ತಂದಿದೆ ಎಂದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ತಮಲೂರು ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ರೂ. 10 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿ ಇಲ್ಲಿಯ ಅಭಿವೃದ್ಧಿ ಮತ್ತು ರಸ್ತೆ ನಿರ್ಮಾಣ ಬಗೆಗೆ ಗಮನ ಹರಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. 80 ಜನ ವೀರಮಾಹೇಶ್ವರ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಭವ್ಯ ಮಂದಿರವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಮಂದಿರದ ನಿರ್ಮಾತೃ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಮುಖಂಡರಾದ ಶಿವಕುಮಾರ ಸ್ವಾಮಿ ಬಂಬುಳಗಿ, ನಾಗಭೂಷಣ ಕಮಠಾಣ, ಸುರೇಶ ಮಾಶೆಟ್ಟೆ, ಚಂದ್ರಯ್ಯ ಸ್ವಾಮಿ, ಪ್ರಶಾಂತ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ, ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪುರ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಕಾರ್ತಿಕ ಮಠಪತಿ ವಂದಿಸಿದರು. ಪುಣ್ಯಾಶ್ರಮದ ಸಹಸ್ರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿದ್ದರು.