ಭೋವಿ ಸಮಾಜದ ಪ್ರಗತಿಗೆ ಮುಂದಾಗಲು ಕರೆ

ತುಮಕೂರು, ನ. ೧೦- ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿರುವ ಬೋವಿ ಸಮಾಜದ ಜನಸಂಖ್ಯೆ, ಅವರ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸಂಘಟನೆ ಶ್ರಮಿಸಬೇಕು ಎಂದು ಮಾಜಿ ಸಚಿವ ಹಾಗೂ ಭಾರತೀಯ ಬೋವಿ ಪರಿಷತ್ ರಾಷ್ಟ್ರೀಯ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದರು.
ನಗರದ ಬಿ.ಎಚ್.ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಎದುರು ಭಾರತೀಯ ಭೋವಿ ಪರಿಷತ್(ಓ.ಸಿ.ಸಿ.ಐ) ಜಿಲ್ಲಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಭೋವಿ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು, ಕಲ್ಲು ಕೆಲಸ, ಕಟ್ಟಡ ಕಟ್ಟುವ ಅನೇಕ ಕುಲಕಸುಬುಗಳನ್ನೆ ನಂಬಿರುವ ಶ್ರಮಿಕರೇ ಹೆಚ್ಚಾಗಿರುವ ಸಮಾಜ ಭೋವಿ ಸಮಾಜ ಎಂದ ಅವರು, ಕಲ್ಲು ಗಣಿಗಾರಿಕೆಯಲ್ಲಿ ಕುಲಕಸುಬನ್ನೆ ನಂಬಿರುವ ಭೋವಿ ಸಮಾಜಕ್ಕೆ ಕಲ್ಲುಗಣಿಗಾರಿಕೆಯಲ್ಲಿ ಮೀಸಲಾತಿ ನೀಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಕಾಯಕವನ್ನೆ ನಂಬಿ ಬದುಕುತ್ತಿರುವ ಭೋವಿ ಸಮಾಜ ಶೈಕ್ಷಣಿಕವಾಗಿ ಮುಂದುವರಿಯಬೇಕಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು, ಸಮಾಜ ಜಾಗೃತರಾಗಬೇಕು ಎಂದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಭೋವಿ ಪರಿಷತ್‌ಗೆ ಸಮುದಾಯ ಭವನ ನಿರ್ಮಿಸಲು ತಮ್ಮ ಅನುದಾನದಲ್ಲಿ ೧೦ ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ಸ್ಥಳೀಯ ಚುನಾವಣೆಗಳಲ್ಲಿ, ಸರ್ಕಾರದ ನಾಮ ನಿರ್ದೇಶನದಲ್ಲಿ ಸಮಾಜದ ಮುಖಂಡರಿಗೆ ಅವಕಾಶ ನೀಡಿರುವುದಾಗಿ ತಿಳಿಸಿದರು.
ಭೋವಿ ಪರಿಷತ್ ಜಿಲ್ಲಾಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂಕಾರ್ ಮಾತನಾಡಿ, ಸಂಘಟನೆಯ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಿದ ಸ್ವಾಮೀಜಿಗಳಿಗೆ, ಲಿಂಬಾವಳಿರವರಿಗೆ ಹಾಗೂ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದರು.
ಜಿಲ್ಲೆಯಾದ್ಯಂತ ಎಲ್ಲ ಭೋವಿ ಕಾಲೋನಿಗಳಿಗೆ ಪ್ರವಾಸ ಮಾಡಿ ಸಮಾಜವನ್ನು ಬಲವಾಗಿ ಸಂಘಟಿಸುವುದಾಗಿ ಮುಖಂಡರಿಗೆ ಭರವಸೆ ನಿಡಿದರು.
ಸಿರಾ ತಾಲ್ಲೂಕಿನ ಮದ್ದಕ್ಕನಹಳ್ಳಿ ಕಲ್ಲು ಗಣಿಗಾರಿಕೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ, ಮುಖ್ಯಮಂತ್ರಿಗಳ ಬಳಿ ಸಮಾಜದ ಮುಖಂಡರ ನಿಯೋಗ ತೆರಳಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಅರವಿಂದ ಲಿಂಬಾವಳಿರವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ರವಿ ಮಾಕಳಿ, ರಾಜ್ಯಾಧ್ಯಕ್ಷ ಆನಂದಪ್ಪ, ಕೆಪಿಸಿಸಿ ಸದಸ್ಯ ಹಾಗು ತಿಪಟೂರು ನಗರಸಭಾ ಸದಸ್ಯ ಯೋಗೀಶ್, ಪಾಲಿಕೆ ಸದಸ್ಯ ಮಂಜುನಾಥ್, ಮುಖಂಡರಾದ ಜಯಶಂಕರ್, ಗಂಗಾಧರ್, ಮಂಜುನಾಥ್, ತ್ರಿಲೋಚನ್, ಕಾಶಿನಾಥ್, ರವಿಕಿರಣ್, ವೆಂಕಟೇಶ್, ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.