ಭೋವಿ ಪದ ದುರ್ಬಳಕೆ ಖಂಡಿಸಿ ಪ್ರತಿಭಟನೆ

ಚಿತ್ತಾಪುರ:ಫೆ.24: ವಡ್ಡರ ಸಮುದಾಯವು ಭೋವಿ ಪದ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ನೇತೃತ್ವದಲ್ಲಿ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಹಸೀಲ್ದಾರ ಸಯ್ಯದ್ ಷಾಷಾವಲಿ ರವರಿಗೆ ಪ್ರತಿಭಟನೆಯ ಮನವಿ ಪತ್ರ ನೀಡಿ ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ಅಧ್ಯಕ್ಷ ಸುರೇಶ ಅಳ್ಳೂಳ್ಳಿ ಮಾತನಾಡಿ ಮೈಸೂರು ಮಹಾರಾಜರ ಸರ್ಕಾರಿ ರಾಜ್ಯ ಪತ್ರ ಆದೇಶದನ್ವಯ, ವಡ್ಡರ ಸಮುದಾಯವು 1944ರ ತಮ್ಮ ದಾವಣಗೆರೆಯ ಪ್ರಥಮ ಸಮ್ಮೇಳನದ ಅಪೇಕ್ಷೆಯ ನಿರ್ಣಯದ ಮೇರೆಗೆ 1946 ರಿಂದ ವಡ್ಡರ ಸಮುದಾಯವನ್ನು ವಡ್ಡರ ಪದದಿಂದ ಬೋಯಿ ಎಂಬ ಪದವಾಗಿ ಕರೆಯಬೇಕೆಂದು ಸರ್ಕಾರಿ ಆದೇಶವನ್ನು ಮಾಡಿಕೊಂಡಿದ್ದರು ಆದ್ರೆ ಇತ್ತೀಚಿನ ಕೆಲವು ವರ್ಷಗಳಿಂದ ಬೋಯಿ ಎಂದಿರುವ ಪದದಿಂದ ಮತ್ತೆ “ಭೋವಿ” ಎಂಬ ನಮ್ಮ ಮೂಲಜಾತಿಯ ಪದವನ್ನು ಬಳಸುತ್ತಿದ್ದಾರೆ.

ಬೋಯಿ ಎಂದು ಮುಂದುವರಿದಲ್ಲಿ, ಸರ್ಕಾರದ ಸೌಲಭ್ಯಗಳು ಕೈತಪ್ಪಬಹುದೆಂಬ ಇಂದಿನ ಸ್ವಾರ್ಥ ಆತಂಕದಿಂದ ಸಂವಿಧಾನಿಕ ಜಾತಿ ಸಾಮರಸ್ಯವನ್ನೇ ಲೆಕ್ಕಿಸದೆ. ವಡ್ಡರ ಸಮುದಾಯದ ಮುಖಂಡರು ರಾಜಕಾರಿಣಿಗಳು ಹಾಗೂ ಸ್ವಾಮಿಜಿಗಳು ನಮ್ಮ ಭೋವಿ ಜಾತಿ ಪದವನ್ನು ಅಪಹರಿಸಿ ದುರ್ಬಳಕೆ ಮಾಡುತ್ತ, ಮೂಲ ಭೋವಿಗಳಾದ ನಮ್ಮ ಸಮುದಾಯದ ವಿರುದ್ಧವೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದೇವೆಂದು ಸ್ಥಳೀಯ ತಹಸೀಲ್ದಾರ ಕಛೇರಿಗಳು ಹಾಗೂ ಇತರ ಸರ್ಕಾರಿ ಇಲಾಖೆಗಳಿಗೆ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ. ಇದಕ್ಕೆ ಸರ್ಕಾರಿ ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳೂ ಸಹ ಪುಷ್ಟಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಡ್ಡರ ಸಮುದಾಯದವರು 2023ರ ಜುಲೈನಲ್ಲಿ ನಮ್ಮ ಜಾತಿ ಕುರಿತು ತಹಸಿಲ್ ಕಚೇರಿಗೆ ಸಲ್ಲಿಸಿದ ಮನವಿ ಸುಳ್ಳು ಅಕ್ಷೇಪಣೆಯಾಗಿದೆ. ಯಾವುದೇ ನಿಖರ ಆಧಾರಗಳಿಲ್ಲದೇ ಸಲ್ಲಿಸಿದ ಈ ಸುಳ್ಳು ಮನಮಿ ಆಧಾರದ ಮೇಲೆ ನಮ್ಮ ಜಾತಿ ಪ್ರಮಾಣ ನೀಡುವಲ್ಲಿ ತಹಸಿಲ್ ಕಚೇರಿಯಿಂದ ಅನಗತ್ಯ ಅಡೆತಡೆ ಮಾಡಬಾರದು. ಭೋವಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಜಾತಿ ಅಸ್ತಿತ್ವಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಭೋವಿ ಸಮಾಜದ ಕಾರ್ಯದರ್ಶಿ ಸಿದ್ರಾಮ ಆಲಮೇಲಕರ್, ಮುಖಂಡ ಶಂಭುಲಿಂಗಪ್ಪ ತಾಂಡೂರಕರ್ ಮಾತನಾಡಿ, ವಡ್ಡರ ಸಮುದಾಯವು ತಮಗೆ ಮೀಸಲಾಗಿರುವ ಸರಕಾರದ ಸೌಲಭ್ಯಗಳು ಪಡೆಯುವಲ್ಲಿ ನಮ್ಮ ಸಮುದಾಯದಿಂದ ಯಾವುದೇ ಅಭ್ಯಂತರ ಇಲ್ಲ. ಆದರೆ ಹಿಂದಿನಿಂದ ವಡ್ಡರ, ಬೋವಿ ಸಮುದಾಯದವರು ಎನಿಸಿಕೊಂಡ ಇವರು ನಮ್ಮ ಭೋವಿ ಜಾತಿ ಪದ ದುರ್ಬಳಕೆ ಮಾಡಿಕೊಂಡು ನಮ್ಮ ಅಸ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತಿರುವುದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಶಂಬಣ್ಣ ಎದರಮನಿ, ಮಲ್ಲಿಕಾರ್ಜುನ ಧರತನೂರ, ಸಿದ್ದಲಿಂಗಪ್ಪ ಬೆಳಗೇರಿ, ನರಸಿಂಹ ಆಲಮೇಲಕರ್, ಶಂಭುಲಿಂಗಪ್ಪ ತಾಂಡೂರಕರ್, ಅಂಬರೀಶ ಕರದಳ್ಳಿ, ಲಕ್ಷ್ಮಣ ತಾಂಡೂರಕರ್, ರಾಹುಲ್ ಚಿಲಕನೂರ, ಲಕ್ಷ್ಮಣ ಮೇಟಿ, ನಾಗೇಂದ್ರ ಎದರಮನಿ. ಶಾಂತಾಬಾಯಿ ತಿಮ್ಮಯ್ಯ, ನಾಗಮ್ಮ ಧರತನೂರ, ಮಲ್ಲಮ್ಮ ಮೇಟಿ, ಶರಣಮ್ಮ ಭೋವಿ, ವಿನಾಯಕ ವಾಮಣ್ಣ, ಗಾಯಿತ್ರಿ ಭೋವಿ, ಇತರರ ಇದ್ದರು.