ಭೋವಿಗುರುಪೀಠಕ್ಕೆ ಅನುದಾನ ನೀಡಲು ಸಿಎಂ ಬಳಿ ಚರ್ಚೆ

ಚಿತ್ರದುರ್ಗ.ಜ.೪ : ಭೋವಿ ವಡ್ಡರ ಗುರುಪೀಠ ರಾಷ್ಟ್ರಮಟ್ಟದ ಶಕ್ತಿಕೇಂದ್ರವಾಗಿಸುವ ದೃಷ್ಠಿಯಿಂದ ಸರ್ಕಾರ ಹೆಚ್ಚು ಅನುದಾನ ಒದಗಿಸಲು  ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ ಹೇಳಿದರು.ನಗರದ ಹೊರವಲಯದಲ್ಲಿರುವ ಗುರುಪೀಠಕ್ಕೆ ಭೇಟಿನೀಡಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಆಶಿರ್ವಾದ ಪಡೆದು ಮಾತನಾಡಿದ ಅವರು, ಭೋವಿ ವಡ್ಡರ ನೆಲೆ ಇಲ್ಲದ ಪರಿಸ್ಥಿತಿಯಲ್ಲಿ ಬದುಕುವವರ ಸಂಖ್ಯೆಯೇ ಹೆಚ್ಚು. ಹಾಗಾಗಿ ಈ ಸಮುದಾಯದ ಅಗತ್ಯತೆಗಳನ್ನು ಪೂರೈಸಲು ಶ್ರಮಿಸುತ್ತೇನೆಂದು ತಿಳಿಸಿದರು. ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಗುಣಮಟ್ಟವನ್ನು ಹೊಂದಿದ ಸಮುದಾಯವನ್ನು ಸಮಾಜದಲ್ಲಿ ಸಮಾನತೆಯ ಜೀವನವನ್ನು ನಡೆಸುವ ಮಟ್ಟಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿ ಸಂಘಟನೆಯದಾಗಿರುತ್ತದೆ. ಜಾಗೃತಿ ಮೂಡಿಸುವ ಮೂಲಕ ಶಿಕ್ಷಣವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಬೇಕೆಂದು ಪೇರೇಪಿಸುವ ಕಾರ್ಯ ನಡೆಯಬೇಕಿದೆ ಎಂದರು. ವಿವಿಧ ಮಠಾಧೀಶರೊಂದಿಗೆ ಮಾತನಾಡಿ, ಹಿಂದುಳಿದ ದಲಿತ ಮಠಗಳು ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಿಣಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಸದೃಢವಾಗಬೇಕಾಗಿದೆ. ಸರ್ಕಾರ ಈಗಾಗಲೇ ಮಠಗಳಿಗೆ ಅನುದಾನ ನೀಡಿದ್ದು, ಅಭಿವೃದ್ಧಿಗಾಗಿ ಅಗತ್ಯವಿದ್ದರೆ ಹೆಚ್ಚು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆಂದು ತಿಳಿಸಿದರು. ಈ ವೇಳೆ ಹೊಸದುರ್ಗ ಕುಚಿಂಟಿಗ ಮಹಾಸಂಸ್ಥಾನದ ಮಠದ ಜಗದ್ಗುರು ಡಾ.ಶಾಂತವೀರಸ್ವಾಮೀಜಿ, ಮಡಿವಾಳ ಗುರುಪೀಠದ ಡಾ.ಮಾಚಿದೇವಾ ಸ್ವಾಮೀಜಿ, ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಕುಂಬಾರ ಗುರುಪೀಠದ ಶ್ರೀ ಗುಂಡಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕೊರಟಗೆರೆಯ ಮಹಾಲಿಂಗಸ್ವಾಮೀಜಿ, ಕಲ್ಕೆರೆಯ ತಿಪ್ಪೇರುದ್ರಸ್ವಾಮಿ, ಚಳ್ಳಕೆರೆಯ ಶ್ರೀ ಬಸವ ಕಿರಣ ಸ್ವಾಮೀಜಿ, ಶಿರಸಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಜರಿದ್ದರು.