ಭೋಗೆಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ

ಕೆಂಭಾವಿ :ಎ.21: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಭೋಗೇಶ್ವರ ದೇವಸ್ಥಾನ ಜೀಣೋದ್ಧಾರ ಕಾರ್ಯ ಗುರುವಾರದಿಂದ ಪ್ರಾರಂಭಗೊಂಡಿದೆ. ದೇವಸ್ಥಾನ ಸಮಿತಿಯ ವಿಶೇಷ ಕಾಳಜಿ ಮತ್ತು ಭಕ್ತರ ಸಹಕಾರದಿಂದ ದೇವಸ್ಥಾನ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು ಪುರಾತನ ದೇವಾಲಯ ನವೀಕೊರಣಗೊಂಡು ಪ್ರವಾಸಿ ತಾಣವಾಗಲೆಂದು ಭಕ್ತರ ಅಪೇಕ್ಷೆಯಾಗಿದೆ. ಸುಮಾರು 12ನೇ ಶತಮಾನದ ದೇವಸ್ಥಾನವೆಂದು ಹೇಳಲ್ಪಡುವ ಇಲ್ಲಿ ಹಲವು ವೈಶಿಷ್ಟ??ಗಳು ಕಂಡು ಬರುತ್ತಿವೆ. ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ಎರಡು ಲಿಂಗಗಳು ಇರುವುದು ಈ ದೇವಸ್ಥಾನದ ವಿಶೇಷವಾಗಿದೆ. ಸುತ್ತಲೂ ನೀರಿನಿಂದ ಆವೃತವಾದ ದೊಡ್ಡ ಪ್ರಮಾಣದ ಕೊಳ ಇದ್ದು ಈ ದೇವಸ್ಥಾನ ಸುಮಾರು ಏಳು ಕಂಬಗಳ ಮೇಲೆ ನಿಂತಿದೆ ಎಂಬ ಉಲ್ಲೇಖ ಇತಿಹಾಸ ನಮಗೆ ತಿಳಿಸಿಕೊಡುತ್ತದೆ.

ಅನೇಕ ವರ್ಷಗಳಿಂದ ನೀರಿನಲ್ಲಿ ಹೂಳು ತುಂಬಿ ಕಂಬಗಳು ಅಗೋಚರವಾಗಿದ್ದು ಈಗ ಬೃಹತ್ ಯಂತ್ರದ ಮೂಲಕ ಹೂಳು ತೆಗೆಯುವ ಕಾರ್ಯ ಆರಂಭವಾಗಿದೆ. ಸುಮಾರು ಹದಿನೈದು ದಿನಗಳ ಕಾಲ ಹೂಳು ತೆಗೆಯುವ ಕೆಲಸ ನಡೆಯಲಿದ್ದು ನಂತರ ದೇವಸ್ಥಾನದ ಸುತ್ತವಿರುವ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಿಸುವುದು, ಸಂಪರ್ಕ ಕಲ್ಪಿಸುವ ಸೇತುವೆ ನವೀಕರಣ, ಬರುವ ಭಕ್ತರಿಗೆ ನೆರಳು, ಕುಡಿಯುವ ನೀರಿನ ಸೌಕರ್ಯ ಸೇರಿ ಹಲವು ಕೆಲಸಗಳು ಕೈಗೆತ್ತಿಕೊಳ್ಲಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಅನೇಕ ವರ್ಷಗಳ ಇತಿಹಾಸವಿರುವ ಭೋಗೇಶ್ವರ ದೇವಸ್ಥಾನದ ಜೀಣೋದ್ಧಾರವನ್ನು ಸಮಿತಿಯ ವಿಶೇಷ ಕಾಳಜಿ ಮತ್ತು ಭಕ್ತರ ಸಹಕಾರದಿಂದ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 20 ರಿಂದ 30 ಲಕ್ಷ ರೂಗಳ ವರೆಗೆ ಇದಕ್ಕೆ ಖರ್ಚು ತಗುಲಲಿದ್ದು ಭಕ್ತರು ಸ್ವಯಂಪ್ರೇರಿತವಾಗಿ ದೇಣಿಗೆ ನೀಡಬಹುದಾಗಿದೆ.
ರಾಜಶೇಖರಯ್ಯ ಹಿರೇಮಠ. ದೇವಸ್ಥಾನದ ಕಾರ್ಯದರ್ಶಿ