ಭೂ ಹಗರಣ: ಸಿಓಡಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಗುಬ್ಬಿ, ಜು. ೨೦- ತಾಲ್ಲೂಕಿನಲ್ಲಿ ೨೦ ವರ್ಷಗಳಿಂದ ಶಾಸಕರಾಗಿರುವ ಶಾಸಕ ಶ್ರೀನಿವಾಸ್‌ರವರು ತಾಲ್ಲೂಕಿನಲ್ಲಿ ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಕೇವಲ ಚುನಾವಣೆಯಲ್ಲಿ ತಮ್ಮ ಬೆಂಬಲಿಗರು, ಅಧಿಕಾರಿಗಳನ್ನು ಬಳಸಿಕೊಂಡು ಭ್ರಷ್ಟಾಚಾರಕ್ಕೆ ಕಾರಣವಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ನಾಗರಾಜು ಆರೋಪಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಭೂ ಹಗರಣವನ್ನು ಸಿಒಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಸಕರೇ ನಾನಂತು ಬಗರ್‌ಹುಕುಂ ಸಾಗುವಳಿ ಮತ್ತು ೫೦, .೫೩ ಬಗ್ಗೆ ಪಿಹೆಚ್‌ಡಿ ಪದವಿ ಮಾಡಿಲ್ಲ. ನೀವು ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿರುವವರು ಸಾಗುವಳಿ ವಿತರಣೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರಿಗೆ ಅನ್ಯಾಯ ಮಾಡಲು ಮುಂದಾಗಬೇಡಿ. ಇಂದು ರೈತರ ಜಮೀನು ಕಬಳಿಸಲು ಮುಂದಾಗಿರುವ ಭ್ರಷ್ಟ ಅಧಿಕಾರಿಗಳು ಮತ್ತು ತಮ್ಮ ಬೆಂಬಲಿಗರಿಗೆ ರೈತರಿಗೆ ಸಿಗಬೇಕಾದ ಜಮೀನಿನಲ್ಲಿ ಪ್ರಭಾವಿಗಳ ಹೆಸರಿಗೆ ಮಂಜೂರಾತಿ ಮಾಡುವ ಮೂಲಕ ಬಡವರ ಜಮೀನು ಕಬಳಿಸಲು ಮುಂದಾಗಿರುವುದು ಸರಿಯಲ್ಲ. ಸುಮಾರು ೪೫೦ ಎಕರೆ ಸರ್ಕಾರಿ ಜಮೀನು ಬ್ರಹಾಂಡ ಭ್ರಷ್ಟಾಚಾರದಲ್ಲಿ ತೊಡಗಿ ತಾಲ್ಲೂಕು ಕಚೇರಿಯ ಸಿಬ್ಬಂದಿ ಹಣ ಮಾಡುವ ಆಸೆಗೆ ಬಿದ್ದು ತಮ್ಮ ಜೇಬು ತುಂಬಿಸಲು ಹೋಗಿ ಜೈಲು ಪಾಲಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಜನತೆಯ ಪರವಾಗಿ ನಿಲುವು ತೋರುವುದು ಬಿಟ್ಟರೆ ತಾಲ್ಲೂಕಿನ ಯಾವ ರೈತರಿಗೆ ನ್ಯಾಯ ದೊರಕಿಸುವಲ್ಲಿ ನಿಮ್ಮ ನಿಲುವು ಇದೆ ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ. ಈ ಬಾರಿ ಜನತೆ ನಿಮ್ಮ ದುರಾಡಳಿತದಿಂದ ಸಾಕಷ್ಟು ನೊಂದಿದ್ದು, ಜನತೆ ಮತ್ತು ರೈತರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ. ಇದಕ್ಕೆ ನೀವು ಪಶ್ಚಾತಾಪ ಪಡುವ ದಿನಗಳು ಸಮೀಪದಲ್ಲಿವೆ ಎಂದರು.
ತಾವು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸಮಯದಲ್ಲಿ ತಾಲ್ಲೂಕಿನ ರಾಜಕೀಯ ಮುಖಂಡರೊಬ್ಬರು ಭ್ರಷ್ಟಾಚಾರದಲ್ಲಿ ಸಿಲುಕಿದಾಗ ಗುಬ್ಬಿ ಪೊಲೀಸರು ಅವರನ್ನು ಚಡ್ಡಿಯಲ್ಲಿ ಠಾಣೆಯಲ್ಲಿ ಕುರಿಸಿದ ಸಮಯದಲ್ಲಿ ನಾನು ಆತನನ್ನು ಬಿಡಿಸಿದ್ದು ಎಂದು ಹೇಳುವ ನೀವು ಭ್ರಷ್ಟಾಚಾರದಲ್ಲಿ ತೊಡಗುವವರನ್ನು ಏಕೆ ಬಿಡಿಸಿಕೊಂಡು ಬಂದಿರಿ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ ಗುರುತರವಾದ ಉದ್ಯೋಗ ಸೃಷ್ಟಿಯನ್ನು ಮಾಡದೆ ಚುನಾವಣಾ ಸಮಯದಲ್ಲಿ ತಮ್ಮ ಹಿಂಬಾಲಕರ ದರ್ಪದಿಂದ ಚುನಾವಣೆ ಗೆಲ್ಲುವುದು ಮುಖ್ಯವಲ್ಲ. ತಾಲ್ಲೂಕಿನ ರೈತ ಹಾಗೂ ಬಡ ಕುಟುಂಬಗಳ ಕಷ್ಟ ಸುಖಗಳಿಗೆ ಸ್ಪಂದಿಸುವಂತಹ ಜನಪ್ರತಿನಿಧಿಯಾಗಬೇಕು. ಕೇವಲ ತನ್ನ ಹಿಂಬಾಲಕರ ಅಭಿವೃದ್ಧಿಗೆ ಸರ್ಕಾರದಿಂದ ಬಂದಂತ ಕಾಮಗಾರಿ ಗುತ್ತಿಗೆಗಳನ್ನು ನೀಡಿ ಚುನಾವಣಾ ಸಮಯದಲ್ಲಿ ಸಹಕಾರ ನೀಡಿದ ಋಣವನ್ನು ತೀರಿಸಲು ಈ ರೀತಿಯ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿರುವುದು ಇವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ದೂರಿದರು.
ಈ ಭೂ ಮಾಫಿಯಾ ದಂಧೆಯ ಹಿಂದಿರುವ ಕಾಣದ ಕೈಗಳನ್ನು ಕಂಡು ಹಿಡಿಯಲು ಸಿಓಡಿ ತನಿಖೆಗೆ ಒಪ್ಪಿಸಲು ಕುಮಾರಸ್ವಾಮಿ ರವರ ಮುಖಾಂತರ ತನಿಖೆಗೆ ಒಳಪಡಿಸಲು ಒಪ್ಪಿಸುತ್ತೇವೆ ಎಂದರು.
ಜೆಡಿಎಸ್ ಮುಖಂಡ ಜೆ.ಡಿ. ಸುರೇಶ್‌ಗೌಡ ಮಾತನಾಡಿ, ಭ್ರಷ್ಟಾಚಾರ ಈ ತಾಲ್ಲೂಕಿನಲ್ಲಿ ತಾಂಡವವಾಡುತ್ತಿದ್ದು, ಅಧಿಕಾರಿಗಳು ಶಾಸಕರ ಚೇಲಗಳಂತೆ ವರ್ತಿಸುತ್ತಿರುವುದು ಎಷ್ಟು ಸಮಂಜಸ. ತಮ್ಮ ಹಿಂಬಾಲಕರಿಗೆ ರೈತರು ಉಳುಮೆ ಮಾಡುತ್ತಿರುವ ಜಾಗವನ್ನು ನೀಡಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದರು.
ತಹಶೀಲ್ದಾರ್ ರವರ ಮುಖಾಂತರ ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳಿಗೆ ಭೂ ಹಗರಣದ ಬಗ್ಗೆ ಸಿಓಡಿ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ, ಜೆಡಿಎಸ್ ಮುಖಂಡ ಶಿವಲಿಂಗಯ್ಯ, ಎಪಿಎಂಸಿ ಯೋಗಾನಂದ, ಡಿ. ರಘು, ಫಿರ್ದೋಸ್ ಅಲಿ, ವಿಜಯ್ ಕುಮಾರ್, ಯಲ್ಲಾಪುರ ಗಂಗಣ್ಣ, ಕಡಬ ಗ್ರಾ.ಪಂ. ಸದಸ್ಯರಾದ ಪುರುಷೋತ್ತಮ್, ಗೋಪಾಲ್‌ಗೌಡ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.