ಭೂ ಹಗರಣ: ಪ್ರಾದೇಶಿಕ ಆಯುಕ್ತರಿಂದಲೇ ಕಳಂಕಿತರಿಗೆ ಕ್ಲೀನ್ ಚಿಟ್

ಮೈಸೂರು. ಜೂ.11: ಮೈಸೂರಿನಲ್ಲಿ ನಡೆದಿರುವ ಭೂ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಆದ್ದರಿಂದ ಭೂ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಒತ್ತಾಯಿಸಿದರು.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಭೂ ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು, ಎಲ್ಲವನ್ನೂ ಸಾರಾ ಸಗಟಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ನಾನು ನಿನ್ನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಹಿಂದಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದನ್ನು ಜಾರಿಗೆ ಮಾಡಿ ಎಂದು ಹೆಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಪ್ರಾದೇಶಿಕ ಆಯುಕ್ತರು ಕಳಂಕಿತರ ನಡುವೆ ಒಂದು ರೀತಿಯ ಒಪ್ಪಂದ ಆಗಿರುವಂತೆ ಕಾಣಿಸುತ್ತದೆ. ಈಗಾಗಲೇ ಮಾತನಾಡಿ ಒಂದು ಒಪ್ಪಂದಕ್ಕೆ ಬಂದಂತೆ ಕಾಣಿಸುತ್ತಿದ್ದು, ಅವರ ವರ್ತನೆ ನೋಡಿದರೆ ಏನು ವರದಿ ಬರಬಹುದೆನ್ನುವುದು ಈಗಾಗಲೇ ತಿಳಿದು ಬರುವಂತಿದೆ. ಒಳ ಒಪ್ಪಂದ ನಡೆದು ವರದಿ ರೆಡಿ ಆಗಿದೆ. ವರದಿ ಸೋಮವಾರ ಕೊಡುತ್ತಾರೆ ಎಂಬ ಶಂಕೆ ವ್ಯಕ್ತಪಡಿಸಿದರು.
ನೀವು ನಿಮ್ಮ ಭವನವನ್ನು ಎಷ್ಟು ಎಕರೆಯಲ್ಲಿ ಕಟ್ಟಿದ್ದೀರಿ, ನಿಮಗೆ ಸೆಂಕ್ಷನ್ ಆಗಿರೋದು ಎಷ್ಟು, ಮುಡಾ ಭೂಮಿ ಎಷ್ಟು ಒತ್ತುವರಿಯಾಗಿದೆ? ಸ್ವಂತ ಆಸ್ತಿ ಎಷ್ಟಿದೆ, ಇದೆಲ್ಲವನ್ನು ಬಿಟ್ಟಿದ್ದೀರಿ, ನಾಲ್ಕು ಆದೇಶಗಳಲ್ಲೂ ಕೂಡ ರಾಜಕಾಲುವೆ ಪ್ರಸ್ತಾಪ ಆಗಿಲ್ಲ, ಪ್ರಸ್ತಾಪ ಆಗಿಲ್ಲದಿರುವುದನ್ನು ಹಿಡಿದು ಓಡಾಡುವುದೇಕೆ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಎಲ್ಲರೂ ಸಿದ್ದಹಸ್ತರಿದ್ದೇವೆ. ಯಾರನ್ನು ಬೇಕಾದರೂ ನಮ್ಮೆಡೆಗೆ ಕೆಡಿಕೋತಿವಿ, ರಾಜಕಾರಣಿಗಳು ನಾವೇ ಭೂಮಾಫಿಯಾ. ಬೇರೆ ಯಾರು ಬಂದಾರು ಇಲ್ಲಿ? ಅದಕ್ಕಾಗಿ ಪ್ರಾದೇಶಿಕ ಆಯುಕ್ತರು ಕೊಡತಕ್ಕ ವರದಿಗೆ ಯಾವ ಬೆಲೆಯೂ ಇಲ್ಲ, ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡತಕ್ಕ ವರದಿಗೆ ಯಾವ ಬೆಲೆಯೂ ಇಲ್ಲ, ವರದಿ ಈಗಾಗಲೇ ಸಿದ್ಧಪಡಿಸಿದ್ದು, ಇಂದು ಸರ್ವೆಗೆ ಹೋಗಿದ್ದಾರೆ. ಸರಪಳಿ ಅಲ್ಲಿಂದ, ಇಲ್ಲಿಂದು ಎಳೆದು ಇಲ್ಲಿ ಏನು ಇಲ್ಲ ಸರ್ ಅಂದು ಬಿಡುತ್ತಾರೆ. ಅದಕ್ಕೆ ನಾನು ಈ ಹಿಂದೆ ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಅವರಿಗೆ ಹೊಡಿತಾರೆ ಅಂತ ಒಂದು ತಿಂಗಳ ಹಿಂದೆಯೇ ಹೇಳಿದ್ದೆ, ಹಾಗೆಯೇ ಆಗಿದೆ. ಈಗಲೂ ಅದಿಕ್ಕೆ ಮೊದಲೇ ಮಾಧ್ಯಮದವರನ್ನು ಕರೆದಿದ್ದೇನೆ. ನಿಮಗೆ ವಿಷಯ ತಿಳಿಸಿದ್ದೇನೆ. ಸೋಮವಾರ ಪ್ರಾದೇಶಿಕ ಆಯುಕ್ತರು ಭೂಕಳಂಕಿತರ ಬಗ್ಗೆ ನೀಡುವ ವರದಿ ಯಾರೂ ನಂಬಂತಕ್ಕಂತದ್ದಲ್ಲ ಎಂದರು.
ಆರ್ ಸಿ ಆಫೀಸ್ ಹತ್ತಿರ ಚಳವಳಿಗೆ ಬಂದು ಕುಳಿತಾಗಲೇ ಗೊತ್ತು, ಏನು ಸ್ವಾಮಿ, ಏನಾದರೂ ಬೆಲೆ ಇದೆಯಾ ಎಂದು ಪ್ರಶ್ನಿಸಿದರು.
ರೋಹಿಣಿ ಸಿಂಧೂರಿಯವರು ನೀಡಿದ ನಾಲ್ಕು ಆದೇಶದ ಬಗ್ಗೆಯೂ ಸೂಕ್ತ ,ಸಮಗ್ರ ಪರಿಶೀಲನೆ ಆಗಬೇಕು, ಅದು ಬಿಟ್ಟು ಸ್ಮಾಲ್ ಪಾಲ್ಟ್ ಹಿಡಿದುಕೊಂಡು ಹೋಗುತ್ತಿರುವುದು ಯಾಕೆ? 98ಸರ್ವೆ ನಂಬರ್ ಮುಡಾದ್ದು ಮುಡಾ ಆಯುಕ್ತರು, ಅಧ್ಯಕ್ಷರು ಏನು ಮಾಡುತ್ತಿದ್ದೀರಿ, ಅಮೂಲಾಗ್ರ ವಿಚಾರಣೆ ಆಗಬೇಕು. ಇಷ್ಟೆ ಅಲ್ಲ, ಮೈಸೂರು ನಗರದಲ್ಲಿ ಬೇಕಾದಷ್ಟು ಆಗಿದೆ. ಮಾಡಿಸಿ, ಎಲ್ಲವೂ ಸಂಪೂರ್ಣ ತನಿಖೆ ಆಗಲಿ, ನಗರಾಭಿವೃದ್ಧಿ ಮಂತ್ರಿಗಳು, ರೆವೆನ್ಯೂ ಮಂತ್ರಿಗಳು ಕೂಡ ಮಾತಾಡುತ್ತಿಲ್ಲ, ಮಾತಾಡಬೇಕು. ಇದು ಸರ್ಕಾರ. ಕಳಂಕಿತರು ಕೂಡ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ಬಂದು ಒಳ ಒಪ್ಪಂದ ಮಾಡಿಕೊಂಡರು ಎಂದು ಆರೋಪಿಸಿದರು.
ಕಳಂಕಿತರು ಮತ್ತು ಪ್ರಾದೇಶಿಕ ಆಯುಕ್ತರ ನಡುವೆ ಒಳ ಒಪ್ಪಂದ ನಡೆದಿದ್ದು ಎಲ್ಲವನ್ನೂ ಸಾರಾಸಗಟಾಗಿ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಪ್ರಾದೇಶಿಕ ಆಯುಕ್ತರ ಮೇಲೆ ನಮಗೆ ನಂಬಿಕೆ ಇಲ್ಲ. ಕಳಂಕಿತರೇ ಪ್ರತಿಭಟನೆಗೆ ಕುಳಿತು ನನ್ನ ಸಾರಾ ಕನ್ವೆನ್ಶನ್ ರಾಜಕಾಲುವೆ ಮೇಲೆ ಹೋಗಿದ್ಯಾ ಅಷ್ಟು ಹೇಳಿ ಅಂತಾರೆ ಬೇರೆ ಯಾವುದಾರ ಬಗ್ಗೆ ಮಾತಾಡಲ್ಲ, ರೋಹಿಣಿಯವರ ಆದೇಶದಲ್ಲಿ ಇರದ್ದನ್ನು ತನಿಖೆ ಮಾಡಿಸಲು ಹೇಳುತ್ತಿದ್ದಾರೆ. ಅದನ್ನು ತನಿಖೆ ಮಾಡಿಸಿ ಆದೇಶದಲ್ಲಿರುವುದನ್ನು ಮುಚ್ಚಿಸಿಹಾಕುವ ಪ್ರಯತ್ನ ನಡೆಯುತ್ತಿದೆ. ನನಗೆ ಅವರ ಮೇಲೆ ಯಾವ ದ್ವೇಷವೂ ಇಲ್ಲ. ಭೂಗಳ್ಳ ಅನ್ನೋ ಕಳಂಕದಿಂದ ಹೊರಬರಲಿ ಅನ್ನೋ ಉದ್ದೇಶವೇ ಹೊರತು ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮಾಧ್ಯಮ ಕರೆದಿದ್ದು ಅದಿಕ್ಕೆ ನಾಳೆ ನಮ್ಮನ್ನೇ ಕಳಂಕಿತರು ಅಂದುಬಿಡುತ್ತಾರೆ. ರೋಹಿಣಿಯವರನ್ನು ಕಳಂಕಿತರು ಅಂತಾರೆ ಅದಿಕ್ಕೆ ಕರೆದಿದ್ದೇನೆ ಎಂದರು.