ಭೂ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ

ಗದಗ ಏ 23 : ಭೂಮಿಯಲ್ಲಿನ ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ಹಾಗೂ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ವಕೀಲರ ಸಂಘ, ಎಸ್.ಎ. ಮಾನ್ವಿ ಲಾ ಕಾಲೇಜ್ ಸಂಯುಕ್ತಾಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ವೆಬ್ ಸೆಮಿನಾರ್ ದಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ಭೂಮಿಯನ್ನು ತಾಯಿಯೆಂದು ಪೂಜಿಸಿದ್ದಾರೆ ಹಾಗೂ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಜನಪದ ಹಾಗೂ ದೇಶಿಯ ಸೊಗಡಿನಲ್ಲಿ ಭೂತಾಯಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಅನಾದಿಕಾಲದಿಂದಲೂ ಭೂಮಿ ತಾಯಿಗೆ ಶ್ರೇಷ್ಟವಾದ ಪವಿತ್ರವಾದ ಸ್ಥಾನವಿದ್ದು ಭೂಮಿಯ ಮೇಲೆ ಹಾಗೂ ಗರ್ಭದಲ್ಲಿ ಅನಂತ ಜೀವಾಣುಗಳು ಹಾಗೂ ಅಮೂಲ್ಯ ನೈಸರ್ಗಿಕ ಸಂಪತ್ತುಗಳಿವೆ. ನಿಸರ್ಗದತ್ತ ಸಂಪತ್ತನ್ನು ರಕ್ಷಿಸಿ ಪರಿಸರ ಸಂರಕ್ಷಣೆ ಯನ್ನು ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಮತ್ತು ಮುಂದಿನ ಪೀಳಿಗೆಗೆ ನಾವು ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂದರು. ಪ್ರಪಂಚದಲ್ಲಿ ಶೇ. 72 ರಷ್ಟು ನೀರು ಹಾಗೂ ಶೇ 28 ರಷ್ಟು ಮಾತ್ರ ಭೂಮಿಯಿದ್ದು ಇದರಲ್ಲಿ ಅಸಂಖ್ಯಾತ ಜೀವಿಗಳು ವಾಸಿಸುತ್ತಿವೆ.
ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಬೆಳೆದ ಆಹಾರವು ವಿಷಯುಕ್ತವಾಗಿ ಪರಿಣಮಿಸುತ್ತಿದ್ದು ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ರೈತರು ಸೇರಿದಂತೆ ಪ್ರತಿಯೊಬ್ಬರೂ ಬೆಳೆ ಬೆಳೆಯಲು ಸಾವಯವ ಗೊಬ್ಬರ ಬಳಸುವುದು ಅವಶ್ಯಕವಾಗಿದೆ. ಇದರಿಂದ ಬೆಳೆಯು ಸಹ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಹಾಗೂ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುವುದಿಲ್ಲ. ಕೈಗಾರಿಕೆಯಿಂದ ಬಿಡಲ್ಪಟ್ಟ ನೀರು ನದಿಗಳಿಗೆ ಕೆರೆಗಳಿಗೆ ಸೇರ್ಪಡೆಗೊಂಡು ನೀರು ಕಲುಷಿತಗೊಳ್ಳುತ್ತಿದೆ. ಕೈಗಾರಿಕೆ ಹಾಗೂ ಅತಿಯಾದ ವಾಹನಗಳಿಂದ ಬಿಡಲ್ಪಟ್ಟ ಕಲುಷಿತ ಹೊಗೆಯಿಂದ ವಾಯುಮಾಲಿನ್ಯವನ್ನು ಇಂದು ನಾವು ಎದುರಿಸುತ್ತಿದ್ದೇವೆ.
ಭೂಮಿ ಮೇಲಿನ ಪ್ರಾಣಿ ಪಕ್ಷಿಗಳಿಗೆ ಆಶ್ರಯದಾವಾಗಿರುವ ಮರ ಗಿಡಗಳನ್ನು ಹಾಗೂ ಔಷಧೀಯ ಸಸ್ಯಗಳನ್ನುಸಂರಕ್ಷಿಸಿ ಭೂ ಸವೆತ , ವಾಯು ಮಾಲಿನ್ಯಗಳನ್ನು ನಾವಿಂದು ತಡೆಯಬೇಕಾಗಿದೆ. ಭೂಮಿ ಮೇಲಿನ ಸಸ್ಯ ಸಂರಕ್ಷಣೆಯಾದರೆ ಮಾತ್ರ ಮನುಕುಲ ಹಾಗೂ ಪ್ರಾಣಿ ಪಕ್ಷಿ ಸಂಕುಲಗಳು ನಿರ್ಭಿತಿಯಿಂದ ಜೀವಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಪರಿಸರ ಸಮತೋಲನವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ.
ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಉತ್ತಮ ಆಹಾರ, ವಿಹಾರ ಪದ್ಧತಿಯನ್ನು ಮೈಗೂಡಿಸಿಕೊಂಡು ಆರೋಗ್ಯ ಯುತ ಜೀವನ ನಡೆಸಲು ಮುಂದಾಗಬೇಕು.
ಪರೋಪಕಾರಕ್ಕಾಗಿಯೇ ಮರಗಳು ಫಲ ಕೊಡುತ್ತವೆ. ಪರೋಪಕಾರಕ್ಕಾಗಿಯೇ ಆಕಳು ಹಾಲು ನೀಡುತ್ತದೆ ಹಾಗೂ ನದಿಗಳು ನೀರು ಹರಿಸುತ್ತವೆ. ಇಂತಹ ಪರೋಪಕಾರಕ್ಕಾಗಿಯೇ ಇರುವ ಸೃಷ್ಟಿಮಾತೆಯನ್ನು ( ಪರಿಸರವನ್ನು) ರಕ್ಷಿಸುವುದು ನೆಮ್ಮಲ್ಲರ ಆದ್ಯಕರ್ತವ್ಯವಾಗಿದೆ ಎಂದರು.
ವಸುಧೈವ ಕುಟುಂಬಕಂ ಎನ್ನುವ ಹಾಗೆ ಅನೇಕ ಅಮೂಲ್ಯ ಜೀವರಾಶಿಗಳ ಆವಾಸ ಸ್ಥಾನವಾಗಿರುವ ಈ ವಸುಧೆಯೇ ( ಭೂಮಿಯೇ ) ಒಂದು ಕುಟುಂಬ ಇದ್ದಹಾಗೆ ಇದರ ಸಂರಕ್ಷಣೆಗೆ ನಾವೆಲ್ಲರೂ ಕಟಿಬದ್ದರಾಗೋಣ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎ. ಮಾನ್ವಿ ಲಾ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಇತರೆ ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.