ಭೂ ಸಂತ್ರಸ್ತರಿಗೆ ಉದ್ಯೋಗ ನೀಡಲು ಆಗ್ರಹ

ರಾಯಚೂರು, ಜೂ.೨- ತಾಲ್ಲೂಕಿನ ವೈಟಿಪಿಎಸ್ ನಿರ್ಮಾಣಕ್ಕೆ ಭೂಮಿ ನೀಡಿದ ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ಲಕ್ಷ್ಯ ವಹಿಸಿದ್ದು ದಯಾಮರಣ ನೀಡಬೇಕು ಎಂದು ಒತ್ತಾಯಿಸಿ ರಾಯಚೂರು ಕೈಗಾರಿಕಾ ಪ್ರದೇಶ ಭೂ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘ ಏಗನೂರು ವಿಭಾಗದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಏಗನೂರು, ಹೆಗ್ಗಸನಹಳ್ಳಿ ಸುತ್ತಮುತ್ತಲಿನ ಗ್ರಾಮದ ಭೂಸಂತ್ರಸ್ಥರು ರಾಯಚೂರು ಕೈಗಾರಿಕಾ ಪ್ರದೇಶ ಭೂ ಸಂತ್ರಸ್ಥರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ( ಉಲ್ಲೇಖ -೧ ) ರ ಪ್ರಕಾರ ಕಳೆದ ಮಾರ್ಚ್ ೧೭ ರಂದು ದಯಾವರ ಮರಣಕ್ಕೆ ಅನುಮತಿ ನೀಡಲು ಕೋರಿ ಮನವಿ ಪತ್ರ ಸಲ್ಲಿಸಲಾಗಿತ್ತು . ಅದರಂತೆ ಅಪರ ಜಿಲ್ಲಾಧಿಕಾರಿ ಉಲ್ಲೇಖ ೨ ರಂತೆ ಮಾರ್ಚ್ ೨೦ ರಂದು ಮಾನ್ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ( ಹೆಚ್.ಆರ್.ಡಿ. ) ವೈ.ಟಿ.ಪಿ.ಎಸ್ . ಅವರಿಗೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ ವರದಿಯನ್ನು ನೀಡಲು ಕೋರಿದ್ದಾರೆ.
ಆದರೆ ವೈ.ಟಿ.ಪಿ.ಎಸ್.ನ ಅಧಿಕಾರಿಗಳು ಇದುವರೆಗೆ ಯಾವುದೇ ಭೂಸಂತ್ರಸ್ಥರಿಗೆ ಉದ್ಯೋಗ ಕಲ್ಪಿಸದೇ ಹಾಗೂ ದಯಾಪರ ಮರಣದ ಕುರಿತು ಬೇಡಿಕೊಂಡರೂ ಇದುವರೆಗೆ ಯಾವುದೇ ಉತ್ತರ ನೀಡದಿರುವುದು ಕರ್ತವ್ಯ ಲೋಪವೆಸಗಿದ್ದಾರೆ ಎಂದು ದೂರಿದರು.
ಸುಮಾರು ೨ ತಿಂಗಳು ಗತಿಸುತ್ತಾ ಬಂದಿದೆ . ಈ ನಡುವೆ ಕೋವಿಡ್ -೧೯ ರ ಎರಡನೇ ಅಲೆಯ ಹರಡುವಿಕೆ ತೀವ್ರವಾಗಿದ್ದರಿಂದ ಸರ್ಕಾರ ಲಾಕ್‌ಡೌನ್ ಘೋಷಿಸಿದೆ . ಇದರಿಂದಾಗಿ ಭೂ ಸಂತ್ರಸ್ಥರಿಗೆ ಕೆಲಸವಿಲ್ಲದೇ ಭೂಮಿಯೂ ಇಲ್ಲದೇ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ನಮ್ಮ ಜಮೀನು ವಶಪಡಿಸಿಕೊಳ್ಳುವಾಗ ಎಲ್ಲ ಭೂ ಸಂತ್ರಸ್ಥರಿಗೂ ನಿಗಮದಲ್ಲಿ ಕೆಲಸ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದರು . ಭೂಮಿ ಕಳೆದುಕೊಂಡ ನಮಗೆ ಕೆಲಸವನ್ನು ಕೊಡದೇ ಮತ್ತು ತಮ್ಮ ನಿಗಮದ ನಿಯಮಾವಳಿಯನ್ನು ಪಾಲಿಸದೆ , ತಮ್ಮ ಮನ ಬಂದಂತೆ ಷರತ್ತು ಮತ್ತು ನಿಯಮಗಳನ್ನು ಬದಲಾಯಿಸಿ ಪರಿಹಾರಕ್ಕೆ ತಿರುಗಾಡುವಂತೆ ಮಾಡಿದ್ದಾರೆ.
ಜಿಲ್ಲಾ ಆಡಳಿತ ಕಚೇರಿಯಿಂದ ೨೦೧೫ ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಂದ ಸಹ ಕೆಲಸಕ್ಕೆ ಅರ್ಹ ೫೨೫ ಜನ ಭೂ ನಿರ್ವಸಿತ ವ್ಯಕ್ತಿಗಳ ಪಟ್ಟಿಯನ್ನು ನಿಗಮ ಪಡೆದಿರುತ್ತದೆ . ಇದನ್ನೂ ಸಹ ಪರಿಗಣಿಸದೆ ನಮ್ಮನ್ನು ಉದ್ಯೋಗ ವಂಚಿತರನ್ನಾಗಿ ಮಾಡಿದ್ದಾರೆ . ಸರಕಾರದಿಂದ ಭೂ ಸಂತ್ರಸ್ಟ ಪ್ರಮಾಣ ಪತ್ರ ಹಾಗೂ ಪರಿಹಾರದ ಚೆಕ್‌ಪಡೆದಿರುವ ಕುಟುಂಬಗಳನ್ನು ಪರಿಗಣಿಸಿಯಾದರೂ ಉದ್ಯೋಗ ನೀಡಬೇಕು ಇಲ್ಲವಾದಲ್ಲಿ ಉದ್ಯೋಗ ವಂಚಿತರಾದ ಭೂ ಸಂತ್ರಸ್ಥರು ವೈ.ಟಿ.ಪಿ.ಎಸ್ ಗೇಟ್ ಹತ್ತಿರ ಅಮರಣಾಂತ ಧರಣಿ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್.ಜಿ.ಪ್ರಭು ಮಡಿವಾಳ,ರಾಮನಗೌಡ,ವೈ.ನರಸಪ್ಪ,ಕೆ.ಸತ್ಯ ನಾರಾಯಣ ರಾವ್,ಸೇರಿದಂತೆ ಇತರರು ಉಪಸ್ಥಿತರಿದ್ದರು.