ಭೂ ವ್ಯಾಜ್ಯ, ತಹಶೀಲ್ದಾರ್ ಇತ್ಯರ್ಥ

ಬಂಗಾರಪೇಟೆ.ಜು೧೧:ತಾಲ್ಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಬಹು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಭೂ ವ್ಯಾಜ್ಯವನ್ನು ಕೋಲಾರ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ರವರ ಸಹಕಾರದೊಂದಿಗೆ ತಹಸೀಲ್ದಾರ್ ರಶ್ಮಿ.ಯು ರವರು ವಿಲೇವಾರಿ ಮಾಡಿ ಸಂಬಂಧಪಟ್ಟ ಫಲಾನುಭವಿ ಮಂಜುನಾಥ್ ರವರಿಗೆ ವರ್ಗಾವಣೆ ಮಾಡಿದರು.
ತಾಲ್ಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಜಮೀನಿಗೆ ಖುದ್ದು ಭೇಟಿ ನೀಡಿ ಮಾದ್ಯಮದವರೊಂದಿಗೆ ಮಾತನಾಡಿದ ತಹಸೀಲ್ದಾರ್ ರಶ್ಮಿ ಅವರು ಸರ್ವೆನಂ.೪೨/ಪಿ೯ರಲ್ಲಿ ೨ಎಕರೆ ಜಮೀನನ್ನು ಸರ್ಕಾರ ೧೫ವರ್ಷ ಪರಭಾರೆ ಮಾಡಬಾರದೆಂಬ ಷರತ್ತಿನ್ವಯ ವೆಂಕಟರಾಮಪ್ಪ ಬಿನ್ ಮಂಜುನಾಥ್ ಅವರಿಗೆ ಸಾಗುವಳಿ ಚೀಟಿ ನೀಡಿರುತ್ತದೆ. ಆದರೆ ಕಾರಣಾಂತರಗಳಿಂದ ವೆಂಕಟೇಶಪ್ಪ ನವರು ನಿಯಮ ಬಾಹಿರವಾಗಿ ಗೋವಿಂದಪ್ಪ ಬಿನ್ ದೊಡ್ಡಬಯ್ಯಣ್ಣ, ಗಂಗಪ್ಪ, ಮತ್ತು ವೆಂಕಟೇಶಪ್ಪನವರಿಗೆ ಪರಭಾರೆ ಮಾಡಿರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ವೆಂಕಟರಾಮಪ್ಪ ಬಿನ್ ಮಂಜುನಾಥ್ ರವರು ಜಮೀನನ್ನು ಮರುದಾನ ಮಾಡುವಂತೆ ಘನ ನ್ಯಾಯಾಲಯಕ್ಕೆ ಮೊರೆ ಹೋಗಿರುತ್ತಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಸದರಿ ಜಮೀನು ವೆಂಕಟರಾಮಪ್ಪ ಬಿನ್ ಮಂಜುನಾಥ್ ಅವರಿಗೆ ಹಸ್ತಾಂತರಿಸುವಂತೆ ಆದೇಶ ನೀಡಿರುತ್ತದೆ.
ಇದಕ್ಕೆ ಅನುಗುಣವಾಗಿ ಈಗಾಗಲೇ ಸಂಬಂಧಪಟ್ಟ ಗೋವಿಂದಪ್ಪ ಬಿನ್ ದೊಡ್ಡಬಯ್ಯಣ್ಣ, ಗಂಗಪ್ಪ, ವೆಂಕಟೇಶಪ್ಪನವರಿಗೆ ಜಮೀನಿನಲ್ಲಿ ಉಳುಮೆ ಮಾಡಿರುವ ಇಳುವರಿಯನ್ನು ಕಟಾವು ಮಾಡುವಂತೆ ತಿಳಿಸಲಾಗಿದ್ದು, ಆದರೆ ಸದರಿ ವ್ಯಕ್ತಿಗಳು ಕಟಾವು ಮಾಡದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಇಂದು ಜಮೀನನ್ನು ವೆಂಕಟರಾಮಪ್ಪ ಬಿನ್ ಮಂಜುನಾಥ್ ಅವರಿಗೆ ಪೊಲೀಸರ ಸಹಕಾರದೊಂದಿಗೆ, ಗ್ರಾಮಸ್ಥರ ಸಮಕ್ಷಮದಲ್ಲಿ ಹಸ್ತಾಂತರ ಮಾಡಲಾಯಿತೆಂದು ತಿಳಿಸಿದರು.
ಸತ್ಯಕ್ಕೆ ಸಂದ ಜಯ:
ಫಲಾನುಭವಿ ಮಂಜುನಾಥ್ ಅವರು ಮಾತನಾಡಿ ೧೯೭೮ರಲ್ಲಿ ಸರ್ಕಾರ ನಮ್ಮ ತಂದೆಯವರಾದ ವೆಂಕಟರಾಮಪ್ಪ ರವರಿಗೆ ಸಾಗುವಳಿ ಚೀಟಿ ನೀಡಿರುತ್ತದೆ. ಆದರೆ ೧೯೯೮ರಲ್ಲಿ ಗೋವಿಂದಪ್ಪನವರು, ನಮ್ಮ ತಂದೆಯವರಿಂದ ಜಮೀನನ್ನು ಅತಿಕ್ರಮಿಸಿಕೊಂಡಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿ ಘನ ನ್ಯಾಯಾಲಯವು ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಜಮೀನು ವೆಂಕಟರಾಮಪ್ಪ ರವರಿಗೆ ಸಲ್ಲಬೇಕು ಎಂದು ಆದೇಶ ನೀಡಿದೆ. ಇದು ಸತ್ಯಕ್ಕೆ ಸಂದ ಜಯ ಎಂದು ಅಭಿವ್ಯಕ್ತಪಡಿಸಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನೀಲ್, ಎಎಸ್‌ಐ ಶಿವಣ್ಣ, ಮುನಿಕೃಷ್ಣ, ಆರ್‌ಐ ಅಜಿತ್, ಗ್ರಾಮ ಲೆಕ್ಕಾಧಿಕಾರಿ ಲೋಹಿತ್, ಒಳಗೊಂಡಂತೆ ದೂರುದಾರ ಮಂಜುನಾಥ್, ಗ್ರಾಮಸ್ಥರಾದ ಮಂಜುನಾಥ್, ಹಾಗೂ ಮುಂತಾದವರಿದ್ದರು.