ಭೂ ರಹಿತ ರೈತರಿಗೆ ಭೂಮಿ ಖರೀದಿ

ಬಾಗಲಕೋಟೆ: ಮಾ29: ಭೂ ಒಡೆತನ ಯೋಜನೆಯಡಿ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 40.21 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 370 ಎಕರೆ ಭೂಮಿಯನ್ನು ಖರೀದಿಸಿ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 370 ಎಕರೆ ಭೂಮಿ ಪೈಕಿ ಮಹಿಳಾ ಕೃಷಿ ಕಾರ್ಮಿಕರಿಕರಿಗೂ ಸಹ 170 ಎಕರೆ ನೀಡಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಮಿ ಯೋಜನೆಯ ಕಡತ ವಿಲೇವಾರಿಯಲ್ಲಿ ಬಾಗಲಕೋಟೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವೆಂದರು. ಲೋಕೋಪಯೋಗಿ ಇಲಾಖೆಯಿಂದ 477 ಕಾಮಗಾರಿಗಳ ಪೈಕಿ 259 ಕಾಮಗಾರಿಗಳು ಪೂರ್ಣಗೊಂಡಿವೆ. ಅದಕ್ಕಾಗಿ 285 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿಗೆ 44 ಲಕ್ಷ ಮಾನವ ದಿನಗಳ ಗುರಿಗೆ 48.29 ಲಕ್ಷ ಸೃಜನೆ ಮಾಡಲಾಗಿದೆ. ವಾರ್ಷಿಕ ಶೇ.112 ರಷ್ಟು ಪ್ರಗತಿ ಸಾಧಿಸಲಾಗಿದೆ. ನರೇಗಾ ಯೋಜನೆಯ ಅನುಷ್ಠಾನದಲ್ಲಿ ರಾಜ್ಯಕ್ಕೆ 3ನೇ ಸ್ಥಾನದಲ್ಲಿದೆ. ಶಿಕ್ಷಣ ಇಲಾಖೆ ಮತ್ತು ನರೇಗಾ ಅನುದಾನದಡಿ ಪ್ರತಿ ತಾಲೂಕಿನ ಒಂದರಂತೆ ಒಟ್ಟು 9 ಪ್ರೌಢಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಕ್ರಮವಹಿಸಲಾಗುತ್ತಿದೆ. ಕೋವಿಡ್ ಮಹಾಮಾರಿಯಿಂದ ವಲಸೆ ಬಂದ 28210 ಕುಟುಂಬಗಳಿಗೆ ಜಾಬ್ ಕಾರ್ಡ ನೀಡಲಾಗಿದೆ ಎಂದು ತಿಳಿಸಿದರು.
ಬರುವ ಎಪ್ರೀಲ್ 1 ರಿಂದ ದುಡಿಯೋಣ ಬಾ ಅಭಿಯಾನ ಪ್ರಾರಂಭಿಸಿ ಎಲ್ಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಯೋಜನೆ ರೂಪಿಸಲಾಗಿದೆ. ಸ್ವಚ್ಚ ಭಾರತ ಮಿಷನ್‍ದಡಿ 238 ಅಂಗನವಾಡಿಗಳಿಗೆ ಶೌಚಾಲಯ ನಿರ್ಮಾಣ, 464 ಶೌಚಾಲಯ ದುರಸ್ಥಿ ಮಾಡಲಾಗಿದೆ. ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆಯಡಿ 132 ಕಾಮಗಾರಿಗಳಿಗೆ 297.50 ಲಕ್ಷ ರೂ. ಖರ್ಚು ಮಾಡಲಾಗಿದೆ. ಜಲ ಜೀವನ ಮಿಷನ್‍ದಡಿ ಪ್ರತಿ ಕುಟುಂಬಕ್ಕೆ 55 ಲೀ ಶುದ್ದ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 244 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ದೊರಕಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತವೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ತಂತ್ರಾಂಶದಲ್ಲಿ 4,90,843 ಸರ್ವೆ ನಂಬರ ಪೈಕಿ 3,77,744 ನೊಂದಣಿಯಾಗಿದ್ದು, ಶೇ.77 ರಷ್ಟು ಪ್ರಗತಿಯಾಗಿದೆ. ಪ್ರಧಾನಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಡಿ 212655 ನೊಂದಣಿಯಾದ ರೈತರಿಗೆ ಈ ವರೆಗೆ ಒಟ್ಟು 217.26 ಕೋಟಿ, ರಾಜ್ಯ ಸರಕಾರದಿಂದ 181242 ರೈತರಿಗೆ 70.36 ಕೋಟಿ ರೂ.ಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಮಧ್ಯಂತರ ಪರಿಹಾರವಾಗಿ 5195 ರೈತರಿಗೆ ಒಟ್ಟು 6.73 ಕೋಟಿ ಬೆಳೆ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಆತ್ಮ ನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಿರುಸಾಲ 10 ಸಾವಿರದಂತೆ ಒಟ್ಟು 3410 ಜನರಿಗೆ ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯಡಿ ಫೆಬ್ರವರಿ ಮಾಹೆಯಲ್ಲಿ 737 ಸ್ವೀಕರಿಸಿದ ಅರ್ಜಿ ಪೈಕಿ 488 ವಿಲೇವಾರಿ 249 ಬಾಕಿ, ಮಾರ್ಚ ಮಾಹೆಯಲ್ಲಿ ಸ್ವೀಕರಿಸಿದ 824 ಅರ್ಜಿಗಳ ಪೈಕಿ 344 ವಿಲೇವಾರಿಯಾದರೆ 480 ಮಾತ್ರ ಬಾಕಿ ಉಳಿದಿರುತ್ತವೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ 2019-20 ಮತ್ತು 2020-21 ಸೇರಿ ಒಟ್ಟು 3000 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಈ ವರ್ಷ 5600 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ. 3ನೇ ಹಂತದ ಯೋಜನೆಯಿಂದ ಒಟ್ಟು 3.72 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.