ಭೂ ರಹಿತರಿಗೆ ಭೂಮಿ, ಸಿಎಂಗೆ ಮನವಿ-ನಿರ್ಧಾರ

ರಾಯಚೂರು, ಡಿ. ೨೯- ಜವಳಗೇರ ನಾಡಗೌಡರ ಭೂ ಪ್ರಕರಣ ಮರುಪರಿಶೀಲನೆ, ನ್ಯಾಯಾಂಗ ತನಿಖೆ ಮೂಲಕ ಭೂರಹಿತರಿಗೆ ಭೂಮಿ ಹಂಚಲು ಒತ್ತಾಯಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ನಾಳೆ ಸಿಂಧೂರಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ಕರ್ನಾಟಕ ರೈತ ಸಂಘ ನಿರ್ಧರಿಸಿದೆ.
ಕರ್ನಾಟಕ ರೈತಸಂಘದ ಪ್ರಮುಖ ಕಾರ್ಯಕರ್ತರ ಮೇಲೆ ದಾಖಲಾಗಿರುವ ಮೂರು ಪ್ರಕರಣಗಳನ್ನು ಹಿಂಪಡೆಯಬೇಕು. ಇಜೆ ಬಸಾಪುರ ಪಗಡದಿನ್ನಿ, ಕುನ್ನಟಗಿ, ಉಪ್ಪಳ, ಬಾದರ್ಲಿ, ಬೆಳಗುರ್ಗಿ, ಅರೆಟನೂರು ಇತರ ಗ್ರಾಮಗಳಲ್ಲಿ ನಾಡಗೌಡರ ಭೂ ಪ್ರಕರಣಕ್ಕೆ ಸಂಬಂಧಿಸಿದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವ ದಲಿತರು ಹಾಗೂ ಇತರ ಬಡವರಿಗೆ ಭೂ ಮಂಜೂರಾತಿ ಒದಗಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದು ಕೆಆರ್‌ಎಸ್ ರಾಜ್ಯಾಧ್ಯಕ್ಷ ಡಿ.ಆರ್. ಪೂಜಾ ಸುದ್ಧಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಾಡಗೌಡ ಹಾಗೂ ಭೂರಹಿತರ ನಡುವೆ ಸರ್ಕಾರಿ ಜಮೀನಿಗಾಗಿ ಹೋರಾಟ ನಡೆಯುತ್ತಿದೆ. ಭೂಮಿ ಪಡೆಯಲು ಮಹಾಧರಣಿಯನ್ನು ಸಹ ಹಮ್ಮಿಕೊಳ್ಳಲಾಯಿತು. ಧರಣಿ ನಿರಂತರ ಬಳಿ ಆಗಮಿಸಿದ್ದ ಕಂದಾಯ ಸಚಿವ ಕೃಷ್ಣಭೈರವಗೌಡ, ಈ ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದ್ದರೂ ಪರಿಹಾರ ಮಾತ್ರ ದೊರೆತ್ತಿಲ್ಲ ಎಂದು ಆರೋಪಿಸಿದರು.
ರಾಯಚೂರಿನ ಅನೇಕ ಭಾಗಗಳಲ್ಲಿ ಸರ್ಕಾರಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಬಡವರ ಮೇಲೆ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿ, ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಬರದಿಂದ ಲಕ್ಷಾಂತರ ಜನರು ಗುಳೇ ಹೋಗುತ್ತಿದ್ದಾರೆ. ತಕ್ಷಣ ಸರ್ಕಾರ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಆರಂಭಿಸಬೇಕು. ಪ್ರತಿ ಕುಟುಂಬಕ್ಕೆ ೧೫೦ ದಿನ ಕೆಲಸ ನೀಡಬೇಕು. ಬರದಿಂದಾಗಿರುವ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ೩೦ ಸಾವಿರದವರೆಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್ಕರ್, ಕಾರ್ಯದರ್ಶಿ ಚಿಟ್ಟಿಬಾಬು, ತಾಲ್ಲೂಕು ಅಧ್ಯಕ್ಷರಾದ ರಮೇಶ್ ಪಾಟೀಲ್, ವೀರೇಶ್ ನಾಯಕ್ ಮುಂತಾದವರು ಇದ್ದಾರೆ.