ಭೂ ಮಾಲೀಕರೊಂದಿಗೆ ಒಡಂಬಡಿಕೆ 18 ತಿಂಗಳೊಳಗೆ ಯೋಜನೆ ಪೂರ್ಣ : ಹೆಚ್.ವಿ.ರಾಜೀವ್

ಮೈಸೂರು, ನ.12:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆ ಮತ್ತು ಪ್ರಾಧಿಕಾರದ ಜಾಗೃತ ದಳ ರಚಿಸುವ ಕುರಿತು ನ.6ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಯೋಜನೆಗಳನ್ನು ಸಂಬಂಧಪಟ್ಟ ಎಲ್ಲಾ ಭೂ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡ 18ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದ ಕರಾರಿಗೆ ಒಳಪಡುವ ಭೂ ಮಾಲೀಕರಿಗೆ ಮುಂಗಡವಾಗಿ 10.00.ಲಕ್ಷರೂ.ಗಳನ್ನು ನೀಡಲಾಗುವುದು. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಅಧಿಸೂಚಿಸಿದ ಜಮೀನುಗಳಿಗೆ ಪರಿಹಾರವಾಗಿ ಯೋಜಿತ ಬಡಾವಣೆ ರಚಿಸಿದ ಬಾಬ್ತು ಲಭ್ಯವಾಗುವ ಒಟ್ಟು ನಿವೇಶನಗಳಲ್ಲಿ ಶೇ.50-50ರ ಅನುಪಾತದಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವ ಇಚ್ಛೆಯಿಂದ ಭೂಮಿ ನೀಡುವವರಿಗೆ ಪರಿಹಾರವಾಗಿ ನಿವೇಶನ ನೀಡುವುದು) ನಿಯಮ-2009 ಹಾಗೂ 2015ರ ತಿದ್ದುಪಡಿ ನಿಯಮಗಳನ್ವಯ ನಿವೇಶನದ ರೂಪದಲ್ಲಿ ಸಂಬಂಧಪಟ್ಟ ಭೂ ಮಾಲೀಕರುಗಳಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
ಜಂಟಿ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಯೋಜನೆಯ ಪ್ರಕಾರ ಲಭ್ಯವಾಗುವ ವಸತಿ ವಲಯದ ಶೇ.50-50ರ ಅನುಪಾತದಡಿ ಪ್ರತಿ ಎಕರೆಗೆ 30×40 ಚದರ ಅಡಿ ಅಳತೆಯ ಅಂದಾಜು 9 ಸಂಖ್ಯೆಯ ನಿವೇಶನಗಳನ್ನು ನೀಡಲಾಗುವುದು. ಪ್ರತಿ ಅಡಿಗೆ ಮೂಲ ದರ ನಿಗದಿ ಮಾಡಿದ ನಂತರ ನೀಡಲಾಗುವ ಅಭಿವೃದ್ಧಿಪಡಿಸಿದ ಒಟ್ಟು ವಿಸ್ತೀರ್ಣದಲ್ಲಿ 10.00 ಲಕ್ಷ ರೂ. ಮೌಲ್ಯದ ನಿವೇಶನವನ್ನು ಪ್ರಾಧಿಕಾರಕ್ಕೆ ಬಿಟ್ಟುಕೊಡಬಹುದು. ಅಥವಾ ನಿವೇಶನಕ್ಕೆ ಪ್ರಾಧಿಕಾರವು ನಿಗದಿಪಡಿಸಿದ ಮೌಲ್ಯದ ಎದುರಾಗಿ ಈ 10.00 ಲಕ್ಷ ರೂ. ಹಣವನ್ನು ಪ್ರಾಧಿಕಾರಕ್ಕೆ ಪಾವತಿಸಿ ಭೂ ಮಾಲೀಕರಿಗೆ ಲಭ್ಯವಾಗುವ ನಿವೇಶನಗಳನ್ನು ಪಡೆದುಕೊಳ್ಳಬಹುದು ಎಂದರು.
ಒಂದಕ್ಕಿಂತ ಹೆಚ್ಚು ಮಂದಿ ವ್ಯಕ್ತಿಗಳು ಭೂ ಮಾಲೀಕತ್ವವನ್ನು ಹೊಂದಿದ್ದಲ್ಲಿ ಅವರುಗಳ ಹಂಚಿಕೆ ಮಾಡುವಂತಹ ನಿವೇಶನಗಳ ಮೇಲೆ ಜಂಟಿಯಾಗಿ ಅನುಪಾತಿಕ ಆಧಾರದ ಮೇಲೆ ಹಕ್ಕನ್ನು ನೀಡಲಾಗುವುದು ಎಂದು ತಿಳಿಸಿದರು.
ಭೂ ಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದಿಲ್ಲ. ಹಂಚಿಕೆ ಪಡೆದವರು ಅವರ ನಿವೇಶನಗಳನ್ನು ಇತರರಿಗೆ ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಭೂ ಮಾಲೀಕರ ಪಾಲಿನನ್ವಯ ನಿವೇಶನ ಹಂಚಿಕೆಯು ಅತಿ ದೊಡ್ಡ ನಿವೇಶನದಿಂದ ಪ್ರಾರಂಭಗೊಂಡು ಅಂದರೆ 50×80, 40×60, 30×40 ಅಡಿಯನ್ವಯ ನೀಡಲಾಗುವುದು. (20×30 ಅಡಿ ಅಳತೆಯ ನಿವೇಶನವನ್ನು ಭೂ ಮಾಲೀಕರಿಗೆ ನೀಡಲಾಗುವುದಿಲ್ಲ) ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಉಪಸ್ಥಿತರಿದ್ದರು.