ಭೂ ಮಾಪಕರಿಗೆ ರೂ.೫.೭೫ ಕೋ. ಗೌರವ ವೇತನ ಬಾಕಿ: ೨ ತಿಂಗಳಿನಿಂದ ಭೂಮಿ ಸರ್ವೆ ಬಂದ್

ಪುತ್ತೂರು, ಎ.೩೦- ಅವಿಭಜಿತ ದಕ ಜಿಲ್ಲೆಯಲ್ಲಿ ಸರ್ವೆ ಇಲಾಖೆಯ ಭೂ ಮಾಪನ ವರ್ಗಕ್ಕೆ ಕೋಟ್ಯಾಂತರ ವೇತನ ಪಾವತಿಯಾಗದೆ ಇದೀಗ ಸರ್ವೆ ಇಲಾಖೆ ಭೂಮಿ ಸರ್ವೆಯನ್ನು ನಡೆಸುವುದನ್ನು ಸ್ಥಗಿತಗೊಳಿಸಿದೆ. ಇದರಿಂದ ಮುಂದಿನ ೬ ತಿಂಗಳು ಸಾರ್ವಜನಿಕರಿಗೆ ಭೂ ನಕ್ಷೆ ಸಿಗುವುದು ಅನುಮಾನವೆನಿಸಿದೆ.
ಕಳೆದ ೨ ತಿಂಗಳಿನಿಂದ ದ.ಕ ಹಾಗೂ ಉಡುಪಿ ಜಿಲ್ಲೆಗಳ ಸರ್ವೆಯರ್‌ಗಳಿಗೆ ಸರ್ಕಾರದಿಂದ ನೀಡಬೇಕಾಗಿದ್ದ ಲಕ್ಷಾಂತರ ರೂ. ಗೌರವ ಧನ ಬಾಕಿಯಿರಿಸಿದ್ದರಿಂದ ಸರ್ವೆಯರ್‌ಗಳು ಮನೆಯಿಂದಲೇ ಮುಷ್ಕರ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಸಾರ್ವಜನಿಕರಿಗೆ ತಾಲೂಕು ಕಚೇರಿ, ಭೂ ದಾಖಲೆ, ನೋಂದಣಿ ಕಚೇರಿಗಳಿಗೆ ಸಲ್ಲಿಸಬೇಕಾದ ಭೂ ನಕ್ಷೆಗಳು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಸರ್ವೆಯರ್‌ಗಳ ಕೊರತೆ ನಿವಾರಣೆಗಾಗಿ ಬೊಕ್ಕಸಕ್ಕೆ ಹೊರೆಯಾಗದಂತೆ ಕಾನೂನಿಗೆ ತಿದ್ದುಪಡಿ ತಂದು ೨೦೦೧ರಲ್ಲಿ ಪರವಾನಗಿ ಪಡೆದ ಭೂ ಮಾಪಕರಿಗೆ ತರಬೇತಿ ನೀಡಿ ಪ್ರತೀ ತಾಲೂಕು ಕಚೇರಿಯಲ್ಲಿ ಸರ್ಕಾರಿ ಭೂ ಮಾಪಕರಂತೆಯೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ೨೦೦೧ರಲ್ಲಿ ಒಂದು ಅರ್ಜಿ ವಿಲೇವಾರಿಗೆ ೩೦೦ ರೂ. ಗೌರವಧನ ಪಾವತಿ ಮಾಡಲಾಯಿತು. ೨೦೦೮ರಲ್ಲಿ ಸೂಕ್ತ ಕೆಲಸ, ಸಕಾಲದಲ್ಲಿ ಗೌರವಧನ ಪಾವತಿಗೆ ಮುಷ್ಕರ ನಡೆಸಿದ್ದರಿಂದ ಪರವಾನಗಿ ಪಡೆದ ಭೂ ಮಾಪಕರಿಗೆ ೧೧ಇ ವ್ಯವಹಾರದ (ಜಮೀನು ಕ್ರಯ, ಕನ್ನರ್ಷನ್, ದಸ್ತಾವೇಜು, ಕ್ರಯ ವ್ಯವಹಾರ) ತಿಂಗಳ ಕಡತಗಳನ್ನು ಬೆಂಗಳೂರಿನಿಂದ ಆನ್‌ಲೈನ್ ಮೂಲಕ ಕಳುಹಿಸುವ, ಗೌರವ ಧನ ಖಾತೆಗೆ ಜಮಾ ಪದ್ಧತಿಯೊಂದಿಗೆ ಗೌರವ ಧನ ರೂ.೮೦೦ ಗಳಿಗೇರಿತು. ಆದರೆ ಸರ್ವೆಯರ್‌ಗಳಿಗೆ ಗೌರವ ಧನ ಸಮರ್ಪಕ ರೀತಿಯಲ್ಲಿ ಲಭಿಸಿದೇ ಇದ್ದುದರಿಂದ ದ.ಕ ಹಾಗೂ ಉಡುಪಿ ಜಿಲ್ಲೆಯ ಸರ್ವೆಯರ್‌ಗಳು ೨ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ.
ಕೋಟ್ಯಾಂತರ ಗೌರವ ವೇತನ ಬಾಕಿ
ಭೂಮಿ ಸರ್ವೇಗಾಗಿ ಅರ್ಜಿದಾರರಿಂದ ೧೨೦೦ರೂ. ಬೆಂಗಳೂರಿನ ಭೂಮಾಪನ ಇಲಾಖೆ ಆಯುಕ್ತರ ಹೆಸರಿಗೆ ಚಲನ್ ತುಂಬಿದ ಬಳಿಕ ಭೂ ಮಾಪಕರು ಭೂ ಮಾಪನ ಮಾಡಿ ಅರ್ಜಿ ವಿಲೇ ಮಾಡುತ್ತಾರೆ. ಪ್ರತಿಯೊಬ್ಬ ಭೂ ಮಾಪಕರಿಗೆ ತಿಂಗಳಿಗೆ ೩೦ ಅರ್ಜಿ ವಿಲೇ ಮಾಡುವ ಜವಾಬ್ದಾರಿಯಿದ್ದು, ಬಹುತೇಕವಾಗಿ ೩೫ಕ್ಕೂ ಅಧಿಕ ಅರ್ಜಿ
ವಿಲೇಯಾಗುತ್ತಿದೆ. ಆದರೆ ಕಳೆದ ೮ ವರ್ಷಗಳಿಂದ ಭೂ ಮಾಪಕರಿಗೆ ಬೆಂಗಳೂರಿನ ಭೂಮಾಪನ ಇಲಾಖೆ ಆಯುಕ್ತರ ಕಚೇರಿಯಿಂದ ಕೇವಲ ೫-೬ ಅರ್ಜಿಗಳ ಮೊತ್ತ ಮಾತ್ರ
ಬಿಡುಗಡೆಯಾಗುತ್ತಿದೆ. ಲಭ್ಯ ಮಾಹಿತಿಯಂತೆ ದ.ಕ ಜಿಲ್ಲೆಯಲ್ಲಿ ೭೫,
ಉಡುಪಿಯಲ್ಲಿ ೬೭ ಭೂ ಮಾಪಕರಿದ್ದು, ಪ್ರತಿಯೊಬ್ಬರಿಗೂ ತಲಾ ೬ ಲಕ್ಷ ರೂ. ಅಧಿಕ ಮೊತ್ತದ ಗೌರವ ವೇತನ ಬಾಕಿಯಿದ್ದು, ದ.ಕ ಉಡುಪಿ ಜಿಲ್ಲೆಯ ಸರ್ವೇಯರ್‌ಗಳಿಗೆ ರೂ. ೫.೭೫ ಕೋ.ವಿತರಣೆಯಾಗಬೇಕಿದೆ.
೨ ತಿಂಗಳಿನಿಂದ ಸರ್ವೆಕಾರ್ಯ ಬಂದ್
ಭೂಮಿಗೆ ಸಂಬಂಧಿಸಿ ವಿವಿಧ ದಾಖಲೆಗಳಿಗಾಗಿ ಕಳೆದ ೨ ತಿಂಗಳಿನಿಂದ ರಾಜ್ಯದಲ್ಲಿ ೬ ಲP ಮಂದಿ ಒಟ್ಟು ೭೫ ಕೋಟಿ ರೂ. ಶುಲ್ಕವನ್ನು ಭೂಮಾಪನ ಇಲಾಖೆ ಆಯುಕ್ತರ ಪದನಾಮ ಪಿಡಿ ಅಕೌಂಟ್‌ಗೆ ಪಾವತಿಸಿದ್ದಾರೆ. ಈಖಾತೆಯಲ್ಲಿ ಒಟ್ಟು ೩೭೦ ಕೋ.ರೂ. ಭೂ ಮಾಪಕರ ವೇತನದ ಮೊತ್ತ ಅಕೌಂಟ್‌ನಲ್ಲೇ ಕೊಳೆಯುತ್ತಿದೆ.

ಉಡುಪಿ ತಾಲೂಕು ಕಚೇರಿಯಲ್ಲಿ ಐದು ಸರ್ಕಾರಿ, ೯ ಪರವಾನಗಿ ಹೊಂದಿದ ಭೂಮಾಪಕರಿzರೆ. ಉಡುಪಿಯಲ್ಲಿ ತುಂಡು ಭೂಮಿ ಹೆಚ್ಚಿದ್ದು ಇನ್ನಷ್ಟು ಸರ್ವೆಯರ್‌ಗಳ ಅಗತ್ಯವಿದೆ. ಈ ಮಧ್ಯೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಭೂಮಾಪಕರಿಂದ ಭೂಮಿ ಸರ್ವೇ ಬಂದ್ ಮಾಡಿದ್ದಾರೆ. ಈಬಗ್ಗೆ ಸೂಕ್ತ ಪರಿಶೀಲನೆ ನಡೆಸಲಾಗುವುದು.
| ಪ್ರದೀಪ್ ಕುರ್ಡೇಕರ್, ತಹಸೀಲ್ದಾರ್, ಉಡುಪಿ ತಾಲೂಕು ಕಚೇರಿ

ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ನಡೆದ ರಾಜ್ಯ ಪರವಾನಗಿ ಭೂ ಮಾಪಕರ ಸಂಘದ ಮುಷ್ಕರಕ್ಕೆ ಜಿಲ್ಲೆಯ ಪರವಾಗಿ ಮಂಗಳೂರಿನ ಭೂಮಾಪಕರ ಬೆಂಬಲ ಸೂಚಿಸಿ ಸರ್ವೇ ಕಾರ್ಯ ಸ್ಥಗಿತಗೊಳಿಸಲಾಗಿದೆ. ವಿಶೇಷವೆಂದರೆ ರಾಜ್ಯದ ವಿವಿಧ ತಾಲೂಕುಗಳಲ್ಲಿ ಇರುವ ಪರವಾನಗಿ ಪಡೆದ ಭೂ ಮಾಪಕರ ವೇತನದ ಮೊತ್ತವು ಭೂಮಾಪನ ಇಲಾಖೆ ಆಯುಕ್ತರ ಪದನಾಮ ಪಿಡಿ ಅಕೌಂಟ್‌ಲ್ಲಿದ್ದರೂ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
| ಪ್ರಶಾಂತ್ ಕೆ, ಅಧ್ಯಕ್ಷರು
ಮಂಗಳೂರು ಪರವಾನಗಿ ಭೂ ಮಾಪಕರ ಸಂಘ