ಬೀದರ್:ಮಾ.30: ಲ್ಯಾಂಡ್ ಗ್ರ್ಯಾಂಟ್ ಕಮಿಟಿ (ಭೂ ಮಂಜೂರಾತಿ ಸಮಿತಿ) ಯ ಬಿಜೆಪಿ ಪಕ್ಷದ ನಾಮನಿರ್ದೇಶಿತ ಸದಸ್ಯರ ವಿರುದ್ಧ ಮಾಜಿ ಸಚಿವರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೀದರ್ ಹಾಗೂ ಚಿಟಗುಪ್ಪಾ ತಾಲೂಕುಗಳ ತಹಶಿಲ್ದಾರರ ಕಛೇರಿಗಳಲ್ಲಿ ಅವರು ಮಂಗಳವಾರ ಲ್ಯಾಂಡ್ ಗ್ರ್ಯಾಂಟ್ ಕಮಿಟಿ ಮೀಟಿಂಗ್ (ಭೂ ಮಂಜೂರಾತಿ ಸಮಿತಿ ಸಭೆ) ಕರೆದಿದ್ದರು, ಶಾಸಕರ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಗೆ ಸಮಿತಿಯ ಬಿಜೆಪಿ ಪಕ್ಷದ ನಾಮನಿರ್ದೇಶಿತ ಸದಸ್ಯರು ಬರಲಿಲ್ಲ. ಸದಸ್ಯರಿಗಾಗಿ ಸುಮಾರು ಒಂದು ತಾಸು ಕಾಯ್ದ ಶಾಸಕರು ಸಭೆಯನ್ನು ಮುಂದುಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಾನು ಇದುವರೆಗೂ ಮೂರು ಬಾರಿ ಸಭೆಯನ್ನು ಮುಂದುಡಿದ್ದಿನಿ. ಪ್ರತಿಬಾರಿ ಕೂಡ ಬಿಜೆಪಿ ಪಕ್ಷದ ನಾಮನಿರ್ದೇಶಿತ ಸದಸ್ಯರು ಗೈರಾಗಿದ್ದಾರೆ. ಅವರ ಉದ್ದೇಶ ಏನಿರಬಹುದು. ಬಡವರಿಗೆ ಭೂಮಿ ಒದಗಿಸಿಕೊಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಾದವರು ಗೈರಾದರೆ ಹೇಗೆ ಎಂದು ಪ್ರಶ್ನಿಸಿದರು.
ಸಭೆಗೆ ನಿರಂತರವಾಗಿ ಗೈರಾಗಿರುವ ಬಿಜೆಪಿಯ ನಾಮನಿರ್ದೇಶಿತ ಸದಸ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿಯ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಅವರಿಗೆ ಪಾಠ ಕಲಿಸುವ ಕೆಲಸವನ್ನು ಬಡಜನರು ಮಾಡುತ್ತಾರೆ. ಅನೇಕರು ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಸಾಗುತ್ತಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಮಹತ್ವದ ಕ್ರಮಕೈಗೊಳ್ಳಬೇಕಾಗುತ್ತದೆ. ಆದರೆ ಬಿಜೆಪಿ ಸದಸ್ಯರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ನಗರದಲ್ಲಿರುವ ತಹಶಿಲ್ದಾರರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬೀದರ್ ತಹಶಿಲ್ದಾರರು ಹಾಗೂ ಅಧಿಕಾರಿಗಳು, ಚಿಟಗುಪ್ಪಾ ತಹಶಿಲ್ದಾರರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಚಿಟಗುಪ್ಪಾ ತಹಶಿಲ್ದಾರರು, ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.