ಭೂ ಕಬಳಿಕೆ: ಉನ್ನತ ತನಿಖೆಗೆ ಸರ್ಕಾರದ ಗಮನ ಸೆಳೆಯುವೆ: ಶಾಸಕ ಜಯರಾಮ್

ಗುಬ್ಬಿ, ಜು. ೧೮- ವ್ಯವಸ್ಥಿತ ಜಾಲವಾದ ಈ ಭೂ ಹಗರಣದಲ್ಲಿ ಇನ್ನೂ ಬಹಳ ಮಂದಿ ಇದ್ದಾರೆ. ಕಾಣದ ಕೈಗಳ ಬೆಳಕಿಗೆ ತರಲು ಉನ್ನತ ತನಿಖೆ ನಡೆಸಲು ಕಂದಾಯ ಸಚಿವರೊಂದಿಗೆ ಚರ್ಚಿಸಿ ಸರ್ಕಾರದ ಗಮನ ಸೆಳೆಯುವೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ರಾಜನೇಹಳ್ಳಿ ಗ್ರಾಮದಲ್ಲಿ ನಡೆದ ಕಾವೇರಿ ನಿಗಮದ ೩೫ ಲಕ್ಷ ರೂ.ಗಳ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಗರಣದಲ್ಲಿ ಈಗಾಗಲೇ ಬಂಧನವಾದ ಆರೋಪಿಗಳ ಜತೆ ಕೇವಲ ಇಪ್ಪತ್ತು ಮಂದಿ ಅಷ್ಟೇ ಅಲ್ಲ. ಇನ್ನೂ ಅರವತ್ತು ಮಂದಿ ಇರುವ ಮಾಹಿತಿ ಇದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದರು.
ತುರುವೇಕೆರೆ ತಾಲ್ಲೂಕಿನಲ್ಲೂ ಆದಾಯ ತೆರಿಗೆ ಪಾವತಿದಾರರು ಹಾಗೂ ೨೦ ಎಕರೆ ಜಮೀನುದಾರರಿಗೆ ಗೋಮಾಳ ನೀಡಿದ್ದ ಬಗ್ಗೆ ದೂರು ಬಂದಿತ್ತು.
ಶಾಸಕನಾದ ಬೆನ್ನಲ್ಲೇ ಈ ಮಾಫಿಯಾಗೆ ಕಡಿವಾಣ ಹಾಕಿದೆ. ಕೂಡಲೇ ೯೦೦ ಪ್ರಕರಣ ತಡೆ ಹಿಡಿದು ಬಡವರಿಗೆ ವಾಸ್ತವ ರೈತರಿಗೆ ಹಂಚಿಸಿದೆ ಎಂದ ಅವರು, ಅಕ್ರಮ ರೀತಿ ಜಮೀನು ದಾಖಲೆ ಸೃಷ್ಟಿಸಿ ಬ್ಯಾಂಕ್ ಮೂಲಕ ಸಾಲ ಪಡೆದು ಕಾರು ಖರೀದಿಸಿ ಓಡಾಡುವವರ ಬಗ್ಗೆ ಈಗಗಲೇ ಪಟ್ಟಿ ಮಾಡಿಸಿದ್ದೇನೆ. ಎಲ್ಲವನ್ನೂ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಭೂ ಹಗರಣದಲ್ಲಿ ಯಾವುದೇ ಪಕ್ಷದವರು ಇದ್ದರೂ ಸಹ ಕಾನೂನು ಕ್ರಮಕ್ಕೆ ಆಗ್ರಹಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸಹ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದಾಗಿ ಹೇಳಿದ ಅವರು, ಚುನಾವಣಾ ಸಂದರ್ಭದಲ್ಲಿ ನಿಗಮ ಮಂಡಳಿ ಜವಾಬ್ದಾರಿ ಯಾರೂ ಕೇಳುವುದಿಲ್ಲ. ಕ್ಷೇತ್ರದಲ್ಲಿ ಸಂಘಟನೆ ಬಗ್ಗೆ ಓಡಾಡಬೇಕಿದೆ. ಈ ಮಧ್ಯೆ ಕಮಿಷನ್ ಕೆಲಸಗಳು ಎಂದು ಆರೋಪಿಸಿದ ಬೆಮೆಲ್ ಕಾಂತರಾಜು ಬುದ್ದಿವಂತರು, ದೊಡ್ಡವರು. ಅವರಿಗೆ ಕ್ಷೇತ್ರದ ಜನರೇ ಉತ್ತರ ನೀಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ವಸಂತ, ಗ್ರಾ.ಪಂ. ಅಧ್ಯಕ್ಷ ನಾರಾಯಣ, ಸದಸ್ಯರಾದ ಮುನಿವೆಂಕಟಪ್ಪ, ದೇವರಾಜ್, ಬಿ.ಟಿ.ಕೃಷ್ಣಪ್ಪ, ಮೂರ್ತಿ, ಸತೀಶ್, ಅಂಜನಸ್ವಾಮಿ, ಪ್ರದೀಪ್, ಹೇಮಾವತಿ ಎಇಇ ನಾಗರಾಜ್, ಗುತ್ತಿಗೆದಾರ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.