ಭೂ ಕಂಪನದಿಂದ ತಲ್ಲಣಗೊಂಡ ಗಡಿಕೇಶ್ವರ ಗ್ರಾಮಕ್ಕೆ ವಿಜ್ಞಾನಿಗಳ ತಂಡದ ಭೇಟಿ

ಕಲಬುರಗಿ:ಅ.13: ಭೂಕಂಪನದಿಂದ ತಲ್ಲಣಗೊಂಡಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಕ್ಕೆ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಸಂಶೋಧನೆ ನಡೆಸುತ್ತಿದ್ದಾರೆ.
ವಿಜ್ಞಾನಿಗಳಿಗೆ ರಾಜ್ಯ ಮೈನ್ಸ್ ಇಲಾಖೆ ಅಧಿಕಾರಿಗಳ ತಂಡ ಸಾಥ್​ ನೀಡಿದೆ. ಜಂಟಿಯಾಗಿ ಭೂ ಕಂಪನದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ 9-55 ಕ್ಕೆ 4.1 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಭೂಮಿಯ 5 ಕೀ.ಮೀಟರ್ ಆಳದಲ್ಲಿ ಕಂಪನವಾಗಿದೆ ಎಂದು ಅಂದಾಜಿಸಲಾಗಿತ್ತು.
ಇದೀಗ ವಿಜ್ಞಾನಿಗಳ ಪ್ರಾಥಮಿಕ ತನಿಖಾ ಮಾಹಿತಿಯಲ್ಲಿ ಅಂದಾಜು 7 ಕೀ. ಮೀಟರ್ ಆಳದವರೆಗೆ ಭೂ ಕಂಪನದ ಎಫೆಕ್ಟ್ ತಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಭೂಕಂಪದಿಂದ ಆಗಿರುವ ಎಫೆಕ್ಟ್​ ಹಾಗೂ ಕಂಪಿಸಲು ಕಾರಣ ಏನು ಅನ್ನೋದು ಸೇರಿದಂತೆ ಹೆಚ್ಚಿನ ಮಾಹಿತಿಯನ್ನ ತಂಡ ಕಲೆ ಹಾಕುತ್ತಿದೆ.
ಈಗಾಗಲೇ ಹೆದರಿದ ಗ್ರಾಮದ ಜನರು ಬೇರೆಡೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇಂದು ಜಿಲ್ಲಾಡಳಿತ ಗಡಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಾಳಜಿ ಕೇಂದ್ರ ಹಾಗೂ ತಾತ್ಕಾಲಿಕ ಶೆಡ್​ ನಿರ್ಮಾಣ ಮಾಡಿದೆ.
ಗಡಿಕೇಶ್ವರ ಗ್ರಾಮದಲ್ಲಿಯೇ ಬೀಡು ಬಿಟ್ಟಿರುವ ಚಿಂಚೋಳಿ ತಹಶೀಲ್ದಾರ್ ಅಂಜುಮ್ ತಬಸುಮ್ ಮತ್ತು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.