ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಬ್ಯಾಡಗಿ,ನ23: ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಾಲೂಕಿನಲ್ಲಿ ರೈತರಿಗೂ ಗೊತ್ತಾಗದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ನೂರಾರು ರೈತರು ತಮ್ಮ ಎತ್ತು, ಚಕ್ಕಡಿಗಳೊಂದಿಗೆ ಮೆರವಣಿಗೆಯ ಮೂಲಕ ಬ್ಯಾಡಗಿ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮೋಟೆಬೆನ್ನೂರ, ಅರಬಗೊಂಡ ಹಾಗೂ ಅಳಲಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 1017 ಎಕರೆ ಫಲವತ್ತಾದ ಕೃಷಿ ಜಮೀನನ್ನು ರೈತರ ಗಮನಕ್ಕೂ ಬರದಂತೆ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಂಡಿರುವುದು ಖಂಡನೀಯ, ರೈತರ ಜೀವನಕ್ಕೆ ಆಧಾರವಾಗಿರುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಬಿಟ್ಟು ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ವಿಜಯಭರತ್ ಬಳ್ಳಾರಿ ಮಾತನಾಡಿ, ರಾಜ್ಯ ಸರ್ಕಾರ ಅಂಧಾ ದರ್ಬಾರ್ ನಡೆಸುವ ಮೂಲಕ ರೈತರ ಹೊಟ್ಟೆ ಮೇಲೆ ಕಲ್ಲು ಹಾಕಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ. ರೈತರು ತಮ್ಮ ಜೀವನಕ್ಕೆ ಇರುವ ಅಲ್ಪ ಜಮೀನಿನಲ್ಲಿ ದುಡಿದು ಬದುಕುವಂತಾಗಿದ್ದು, ರಾಜ್ಯ ಸರ್ಕಾರ ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿರುವುದು ರೈತರ ಜಂಘಾಬಲವೇ ಉಡುಗಿ ಹೋದದಂತಾಗಿದೆ. ಈ ಯೋಜನೆಯನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸುವುದನ್ನು ಕೈಬಿಟ್ಟು ರೈತರ ಜಮೀನನ್ನು ಉಳಿಸಿ ಅವರ ಹಿತ ಕಾಯಲು ಆಗ್ರಹಿಸಿದರು.

ತಾಲೂಕಿನ ರೈತರ ಹಿತ ಕಾಯಲು ಸಿದ್ಧ:
ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕರ್ನಾಟಕ ಕೈಗಾರಿಕಾ ಅಭಿವೃಧ್ದಿ ಮಂಡಳಿ ದಾವಣಗೆರೆಯ ಅಧಿಕಾರಿಗಳು ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ತಾಲೂಕಿನ ಮೂರು ಗ್ರಾಮಗಳಾದ ಮೋಟೆಬೆನ್ನೂರ, ಅಳಲಗೇರಿ ಮತ್ತು ಅರಬಗೊಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 1017 ಎಕರೆಯಷ್ಟು ರೈತರ ಫಲವತ್ತಾದ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ತಾಲೂಕಿನಲ್ಲಿ ರೈತರ ಫಲವತ್ತಾದ ಜಮೀನನ್ನು ಈ ಯೋಜನೆಗೆ ನೀಡುವ ಪ್ರಶ್ನೆಯೇ ಇಲ್ಲ. ಈ ಯೋಜನೆಗೆ ತಮ್ಮ 35ಎಕರೆ ಜಮೀನು ಸೇರಿದಂತೆ ಒಟ್ಟಾರೆ 1017ಎಕರೆ ಜಮೀನನ್ನು ಭೂಸ್ವಾಧೀನ ಮಾಡಲು ಕೈಗೆತ್ತಿಕೊಂಡಿದ್ದು, ಇದನ್ನು ವಿರೋಧಿಸಿ ಈಗಾಗಲೇ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಜೊತೆ ಮಾತನಾಡಿದ್ದು, ಈ ಯೋಜನೆಯನ್ನು ಕೈಬಿಡಲು ಒತ್ತಾಯಿಸಿರುವುದಾಗಿ ತಿಳಿಸಿದರು.

ದಾವಣಗೆರೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರದ ಗಮನಕ್ಕೆ ಈ ಬಗ್ಗೆ ಮಾಹಿತಿ ನೀಡಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ರೈತರು ಡಿಸೆಂಬರ್ 4ರೊಳಗಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಇಲ್ಲವಾದರೆ ಡಿಸೆಂಬರ್ 5ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗಂಗಣ್ಣ ಎಲಿ, ಚನ್ನವೀರಪ್ಪ ಬಳ್ಳಾರಿ, ನಾಗರಾಜ ಕಟಗಿ, ಮಂಜುನಾಥ ಬೆಳಕಿನಕೊಂಡ, ಶಿವಪುತ್ರಪ್ಪ ಅಗಡಿ, ನಾಗರಾಜ ಅನ್ವೇರಿ, ಬಸವರಾಜ ಬಳ್ಳಾರಿ, ಉಜ್ಜಪ್ಪ ಗುಡುಗೂರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.