ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಮನವಿ

ಬ್ಯಾಡಗಿ,ಟಿ.19: ರಾಜ್ಯ ಸರ್ಕಾರ ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ರೈತರಿಗೂ ಗೊತ್ತಾಗದಂತೆ ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ನೂರಾರು ರೈತರು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿದರು.
ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿರುವ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರ ನಿವಾಸಕ್ಕೆ ತೆರಳಿದ ನೂರಾರು ರೈತರು, ತಮ್ಮ ಜೀವನಕ್ಕೆ ಆಧಾರವಾಗಿರುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಬಿಟ್ಟು ಕೊಡುವುದಿಲ್ಲ ಎಂದು ಮನವಿ ಸಲ್ಲಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮೋಟೆಬೆನ್ನೂರ, ಅರಬಗೊಂಡ ಹಾಗೂ ಅಳಲಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 1017 ಎಕರೆ ಫಲವತ್ತಾದ ಕೃಷಿ ಜಮೀನನ್ನು ರೈತರ ಗಮನಕ್ಕೂ ಬರದಂತೆ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಂಡಿರುವುದು ಖಂಡನೀಯ, ರಾಜ್ಯ ಸರ್ಕಾರ ಅಂಧಾ ದರ್ಬಾರ್ ನಡೆಸುವ ಮೂಲಕ ರೈತರ ಹೊಟ್ಟೆ ಮೇಲೆ ಕಲ್ಲು ಹಾಕಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಬಸವರಾಜ ಬಳ್ಳಾರಿ ಮಾತನಾಡಿ, ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಸ್ಥಳೀಯ ಶಾಸಕರಿಗೂ ಮಾಹಿತಿ ಇಲ್ಲದೇ ಇರುವುದು ವಿಷಾದಕರ. ರೈತರು ತಮ್ಮ ಜೀವನಕ್ಕೆ ಇರುವ ಅಲ್ಪ ಜಮೀನಿನಲ್ಲಿ ದುಡಿದು ಬದುಕುವಂತಾಗಿದೆ. ಈಗ ರಾಜ್ಯ ಸರ್ಕಾರ ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿರುವುದು ರೈತರ ಜಂಘಾಬಲವೇ ಉಡುಗಿ ಹೋದದಂತಾಗಿದೆ. ಈ ಯೋಜನೆಯನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸುವುದನ್ನು ಕೈಬಿಟ್ಟು ರೈತರ ಜಮೀನನ್ನು ಉಳಿಸಿ ಅವರ ಹಿತ ಕಾಯಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನೂರಾರು ರೈತರು ಉಪಸ್ಥಿತರಿದ್ದರು.