
ವಿಜಯಪುರ ಸೆ.03: ರಾಜ್ಯದಲ್ಲಿ ಪ್ರತಿ ವರ್ಷ ವಾಡಿಕೆಯಂತೆ ಮಳೆ ಆಗದೇ ಇರುವದರಿಂದ ರಾಜ್ಯದ ಕೆಲ ಭಾಗಗಳಲ್ಲಿ ಬರಗಾಲ ಛಾಯೆ ಕಂಡುಬರುತ್ತಿದ್ದು, ಇಂತಹ ಸಂದರ್ಭದಲ್ಲೂ ರೈತರಿಗೆ ತೊಂದರೆಯಾಗದಂತೆ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆಲಮಟ್ಟಿಯ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ನಂತರ ಕೃಷ್ಣಾಭಾಗ್ಯ ಜಲ ನಿಗಮದ ಕಚೇರಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೀರಾವರಿಗೆ ಆದ್ಯತೆ ನೀಡುವುದರ ಜೊತೆಗೆ ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಸರಕಾರ ವಿಶೇಷ ಆದ್ಯತೆ ನೀಡಲಿದೆ ಎಂದರು.
ಮೂರನೇ ಹಂತಕ್ಕೆ 2012 ರಲ್ಲಿ 17800 ಕೋಟಿ ಅಂದಾಜಿಸಲಾಗಿತ್ತು, 2017ರಲ್ಲಿ ಅದು 51148 ಕೋಟಿಗೆ ಪರಿಸ್ಕøತವಾಯಿತು. ಇಲ್ಲಿಯವರೆಗೆ ಖರ್ಚಾಗಿದ್ದು, 14 ಸಾವಿರ ಕೋಟಿ, ಇನ್ನು 67 ಸಾವಿರ ಕೋಟಿ ಖರ್ಚು ಮಾಡಬೇಕಿದೆ. ಸರಕಾರ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ತ್ವರಿತಗತಿಯಲ್ಲ್ಲಿ ಅಧಿಸೂಚನೆ ಆಗಬೇಕಿದೆ.ಈ ಭಾಗದ ರೈತರಿಗೆ ನೀರು ಕೊಡುವ ಮೂಲಕ ಉತ್ಪಾದನೆ ಹೆಚ್ಚಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಿದರು.
ಈ ಮೂರನೇ ಹಂತದ ಯೋಜನೆಯ ಕುರಿತು ಮತ್ತೊಂದು ಸಭೆ ನಡೆಸಿ ಯೋಜನೆ ಪೂರ್ಣಗೊಳಿಸಲು ಅನುದಾನ ವೆಚ್ಚ ಆಗುವುದರ ಬಗ್ಗ ಇನ್ನೀತರ ವಿಷಯಗಳ ಎಂಬುದನ್ನು ಚರ್ಚಿಸಿ ನಿರ್ಧಾರಕ್ಕೆ ಬರಲಾಗುತ್ತದೆ. ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು. ಅಲ್ಲದೇ ಮೆಕೆದಾಟು, ಮಹದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿಯವರ ಗಮನಕ್ಕೆ ತಂದು ಕೇಂದ್ರ ಸರಕಾರದಿಂದ ಹೆಚ್ಚಿನ ಹಣ ಬಿಡುಗಡೆ ಒತ್ತಾಯಿಸುವುದಾಗಿ ತಿಳಿಸಿದರು.
ಒಟ್ಟಿನಲ್ಲಿ ನೀರಾವರಿ ಯೋಜನೆ ಆಗಬೇಕಿದೆ. ಈ ಭಾಗದ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವತ್ತ ಬದ್ಧವಾಗಿದ್ದೇವೆ.ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ಮುಖ್ಯವಾಗಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ ಭೂಸ್ವಾದೀನ, ಪುನರ್ ವಸತಿ, ಪುನರ್ ನಿರ್ಮಾಣಕ್ಕೆ ವಿಳಂಬ ಮಾಡಿದಲ್ಲಿ ನಮಗೆ ಹೊರೆಯಾಗಲಿದ್ದು, ಆದಷ್ಟು ಬೇಗನೇ ಅಧಿಕಾರಿಗಳ ಜೊತೆ ಕೆಲವೇ ದಿನಗಳಲ್ಲಿ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುವುದು. ಜಮೀನು, ಮನೆ ಕಳೆದುಕೊಂಡ ಸಂತ್ರಸ್ಥರಿಗೆ ವಿಶೇಷ ಅನುದಾನ ನೀಡುವ ಚಿಂತನೆ ಮಾಡಲಾಗುತ್ತಿದೆ ಎಂದರು.
ಕೃಷ್ಣಾ ಮೇಲ್ದಂಡ ಯೋಜನೆ ಪೂರ್ಣಗೊಳಿಸುವ ಕುರಿತು ಸಭೆಯಲ್ಲಿ ಉಪಸ್ಥಿತರಿದ್ದ ಸಚಿವರ, ಸಂಸದರ, ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರ ಸಲಹೆಗಳನ್ನು ಪಡೆದುಕೊಂಡರು. ಆಯಾ ಜನಪ್ರತಿನಿಧಿಗಳು ಮುಳುಗಡೆ ಸಂತ್ರಸ್ಥರಿಗೆ ನೀಡಬೇಕಾದ ಪರಿಹಾರ, ಪುನರ್ ವಸತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಹಸ್ತಾಂತರ ಹಾಗೂ ಹಕ್ಕುಪತ್ರ ಇನ್ನು ಕೆಲವರಿಗೆ ಹಕ್ಕುಪತ್ರ ವಿತರಣೆ ಆಗದಿರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವ ಡಾ. ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಂಸದರಾದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಸೇರಿದಂತೆ ಉಭಯ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶಸಿಂಗ್, ಕೃಷ್ಣಾ ಭಾಗ್ಯ ಜಲ ನಿಮಗದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ, ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಇತರರು ಉಪಸ್ಥಿತರಿದ್ದರು.