ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ: ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರದ ಕುಮ್ಮಕ್ಕು

ಗುಬ್ಬಿ, ಸೆ. ೧೬- ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಂದ ೨೫೦ ಕೋಟಿ ರೂ.ಗಳ ಲಂಚ ಪಡೆದ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ತಿದ್ದುಪಡಿ ತರಲು ಮುಂದಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿನ ರೈತ ಸಂಘದ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗಷ್ಟೇ ಜಮೀನು ಮಾರಾಟದ ಕಾನೂನು ಸಡಿಲಗೊಳಿಸಿ ಹಣವಂತರ ಬಳಿ ಇರುವ ಕಪ್ಪು ಹಣವನ್ನು ಬಳಸಿಕೊಂಡು ಜಮೀನು ಖರೀದಿಗೆ ಅವಕಾಶ ಮಾಡಿಕೊಟ್ಟ ರಾಜಕಾರಣಿಗಳು ತಮ್ಮ ಬಳಿ ಇರುವ ಭ್ರಷ್ಟ ಹಣವನ್ನು ಜಮೀನು ಕೊಳ್ಳಲು ಬಳಸಲಿದ್ದಾರೆ. ಕಾರ್ಪೋರೇಟ್ ಕಂಪೆನಿಗಳಿಗೆ ಅವಕಾಶ ಕೊಡುವ ಜತೆಗೆ ತಮ್ಮ ಷೇರುದಾರ ವ್ಯವಹಾರಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಶೇ. ೭೦ ರಷ್ಟಿರುವ ರೈತಾಪಿ ವರ್ಗದಲ್ಲಿ ಬಹುತೇಕ ಸಣ್ಣ ರೈತರು ಈ ಕಾಯ್ದೆ ತಿದ್ದುಪಡಿಗೆ ಬಲಿಯಾಗಿ ತಮ್ಮ ಜಮೀನು ಮಾರಾಟ ಮಾಡಿಕೊಂಡು ಪರ್ಯಾಯ ಉದ್ಯೋಗ ತಿಳಿಯದೇ ಪರದಾಡುವಂತಾಗುತ್ತದೆ. ಜಮೀನು ಕೊಳ್ಳುವ ಬಂಡವಾಳಶಾಹಿಗಳು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತಾರೆ. ಕೃಷಿ ತೊರೆದು ರೈತ ನಿರುದ್ಯೋಗಿಯಾಗಿ ನಗರಕ್ಕೆ ವಲಸೆ ಹೋಗುತ್ತಾನೆ. ಆದರೆ ದೇಶದಲ್ಲಿ ಆಹಾರ ಕೊರತೆಗೆ ಸರ್ಕಾರವೇ ಹೊಣೆಯಾಗಲಿದೆ. ಇಡೀ ಕೃಷಿ ಚಟುವಟಿಕೆ ಸಿರಿವಂತರ ಕೈ ಸೇರಿ ಮನಬಂದಂತೆ ವರ್ತಿಸಿ ಮಾರುಕಟ್ಟೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಈ ಕೆಲಸಕ್ಕೆ ಎಪಿಎಂಸಿ ಕಾಯಿದೆ ಕೂಡಾ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಕುಟುಂಬಕ್ಕೆ ಮೊದಲು ೫೬ ಎಕರೆ ಸೀಮಿತ ಪ್ರದೇಶ ಎನ್ನುವಂತಿದ್ದ ಕಾನೂನು ತಿದ್ದುಪಡಿ ಮಾಡಿ ನಾಲ್ವರ ಕುಟುಂಬಕ್ಕೆ ೧೦೫ ಎಕರೆ, ೫ ಕ್ಕಿಂತ ಅಧಿಕ ಕುಟುಂಬಕ್ಕೆ ೨೧೬ ಎಕರೆ ಪ್ರದೇಶಕ್ಕೆ ಅನುವು ಮಾಡಿರುವ ಜತೆಗೆ ವಿದ್ಯುತ್ ಕಾಯಿದೆಯನ್ನೂ ತಿದ್ದುಪಡಿ ಮಾಡಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಿದ್ದಾರೆ. ಬಡವರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಎಲ್ಲವನ್ನೂ ಮೀಟರ್ ಅವಳಡಿಸಿ ಹಣ ವಸೂಲಿ ಮಾಡಲಿದ್ದಾರೆ ಎಂದ ಆರೋಪಿಸಿದ ಅವರು, ಹಸಿರು ಶಾಲು ಧರಿಸಿ ಅಧಿಕಾರ ಪಡೆದ ಯಡಿಯೂರಪ್ಪ ಅವರ ವಿರುದ್ದ ಸಮರ ಸಾರಲು ರೈತ ಸಂಘ ಮುಂದಾಗಿದೆ. ಇದರ ಜತೆಗೆ ೨೭ ಸಂಘಟನೆಗಳು ಇದೇ ತಿಂಗಳ ೨೧ ರಂದು ಒಗ್ಗೂಡಿ ಬೆಂಗಳೂರಿನಲ್ಲಿ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಲಿವೆ ಎಂದರು.
ಈ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯಭವನದಲ್ಲಿ ಪರ್ಯಾಯ ಅಧಿವೇಶನ ಮೂಲಕ ತಿದ್ದುಪಡಿ ಪ್ರಕ್ರಿಯೆ ಹಿಂಪಡೆಯಲು ಆಗ್ರಹಿಸಲಾಗುವುದು. ಈ ಕಾರ್ಯಕ್ರಮಕ್ಕೆ ರಾಷ್ಟ್ರ ಮಟ್ಟದ ರೈತ ನಾಯಕರು ಆಗಮಿಸಲಿದ್ದಾರೆ. ಜಿಲ್ಲೆಯಿಂದ ಒಂದು ಸಾವಿರ ಮಂದಿ ರೈತರು ಭಾಗವಹಿಸಲಿದ್ದು, ಗುಬ್ಬಿ ತಾಲ್ಲೂಕಿನಿಂದ ೩೦೦ ಮಂದಿ ರೈತರು ಈ ಚಳವಳಿಗೆ ಸಾಥ್ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಎನ್.ವೆಂಕಟೇಗೌಡ, ಉಪಾಧ್ಯಕ್ಷ ಶಿವಕುಮಾರ್, ಮಂಜುನಾಥ್, ಕಾರ್ಯಾಧ್ಯಕ್ಷರಾದ ಗುರುಚನ್ನಬಸವಯ್ಯ, ಸಿ.ಜಿ.ಲೋಕೇಶ್, ಪದಾಧಿಕಾರಿಗಳಾದ ಬಸವರಾಜು, ರಮೇಶ್, ಜಗದೀಶ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.