ಭೂಸನೂರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಥಂಬೆ ಆಗ್ರಹ

ಕಲಬುರಗಿ :ನ.07: ಜಿಲ್ಲೆಯ ಆಳಂದ್ ತಾಲ್ಲೂಕಿನ ಭೂಸನೂರಿನಲ್ಲಿರುವ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಪುನರಾರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಬೆ ಅವರು ಆಗ್ರಹಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಕಬ್ಬು ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದಾರೆ. ಸಣ್ಣ ಹಾಗೂ ದೊಡ್ಡ ರೈತರ ಕಬ್ಬು ಇದ್ದು, ಅದನ್ನು ಕಾರ್ಖಾನೆಗೆ ತೆಗೆದುಕೊಂಡು ಹೋಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಆದಾಗ್ಯೂ, ಭೂಸನೂರಿನ ಸಕ್ಕರೆ ಕಾರ್ಖಾನೆಯು ಯೋಗ್ಯ ಬೆಲೆ ನಿಗದಿಪಡಿಸದೇ ಕಾರ್ಖಾನೆಯನ್ನು ಆರಂಭಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ಕೇವಲ 2,400ರೂ.ಗಳ ಬೆಲೆಯನ್ನು ನಿಗದಿಪಡಿಸಿದ್ದು ಸರಿಯಾದುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಬ್ಬಿನ ಬೆಂಬಲ ಬೆಲೆಯನ್ನು ಸುಮಾರು 3600ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಸಕ್ಕರೆ ಕಾರ್ಖಾನೆಯನ್ನು ಬೆಲೆ ಹೆಚ್ಚಳದೊಂದಿಗೆ ಶೀಘ್ರ ಪುನರಾರಂಭಿಸದೇ ಹೋದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಅತಿವೃಷ್ಟಿಯಿಂದ ತೊಗರಿ ಉದ್ದು, ಸೋಯಾಬಿನ್, ಹೆಸರು ಮುಂತಾದ ಬೆಳೆಗಳು ಸರ್ವನಾಶವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರವು ಪ್ರತಿ ಎಕರೆಗೆ 25000ರೂ.ಗಳ ಪರಿಹಾರ ಧನವನ್ನು ಕೊಡಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಸತ್ಯಂಪೇಟ್, ಉಮಾಪತಿ ಪಾಟೀಲ್, ವಿಜಯಕುಮಾರ್ ಹತ್ತರಕಿ, ಮಂಜು ಕಮಲಾಪುರ, ದಸ್ತಗೀರಸಾಬ್ ಮುಂತಾದವರು ಉಪಸ್ಥಿತರಿದ್ದರು.