ಭೂಮಿ ಹಡಿಲು ಬಿಟ್ಟರೆ ಸರ್ಕಾರದಿಂದಲೇ ಕೃಷಿ

ಮಂಗಳೂರು, ಜೂ.೪- ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ಸುಮಾರು ೨೬೩ ಹೆಕ್ಟೇರು ಹಡೀಲು ಭೂಮಿಯನ್ನು ಗುರುತಿಸಲಾಗಿದೆ. ಆ ಪೈಕಿ ೧೭೨ ಹೆಕ್ಟೇರು ಭೂಮಿ ಮರುಕೃಷಿಗೆ ಅನುಕೂಲವಾಗಿದೆ. ಕೃಷಿ ಭೂಮಿಯನ್ನು ಯಾವ ಕಾರಣಕ್ಕೂ ಹಡೀಲು ಬಿಡುವಂತಿಲ್ಲ. ಒಂದೋ ಭೂ ಮಾಲಕರು ಕೃಷಿ ಮಾಡಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ಸರಕಾರವೇ ಹಡೀಲು ಭೂಮಿಯಲ್ಲಿ ಕೃಷಿ ನಡೆಸಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ಕೆಲವು ವರ್ಷಗಳಿಂದ ಹಡೀಲು ಬಿದ್ದಿರುವ ಕೃಷಿ ಭೂಮಿಯಲ್ಲಿ ಸರಕಾರದ ಕೃಷಿ ನೀತಿ `ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’ ಕಾರ್ಯಕ್ರಮದಡಿ ಗಂಜಿಮಠ ಗ್ರಾಪಂ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರು, ಅಧಿಕಾರಿಗಳು ಮತ್ತು ಜನಪ್ರತಿ ನಿಧಿಗಳೊಂದಿಗೆ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೃಷಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಭೌಗೋಳಿಕ ಅನುಕೂಲಕ್ಕೆ ತಕ್ಕಂತೆ ಭತ್ತ ಅಥವಾ ಪರ್ಯಾಯ ಬೆಳೆಗೆ ಮುಂದಾಗಬೇಕು. ಹಡೀಲು ಭೂಮಿ ಇತರರಿಗೆ ನೀಡಿದರೆ ಭೂಮಿ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂಬ ಭೀತಿ ಬೇಡ. ಇನ್ನಾದರೂ ಸರಕಾರದ ಪ್ರಯೋಜನ ಪಡೆದು ಕೃಷಿ ಮಾಡಲು ಭೂಮಾಲಕರಿಗೆ ಅವಕಾಶವಿದೆ. ಇಲ್ಲವಾದಲ್ಲಿ ಗ್ರಾಮ ಮಟ್ಟದಲ್ಲಿ ಸೂಚಿಸಲ್ಪಡುವ ಅಧಿಕೃತರು ಕೃಷಿ ಮಾಡಲಿದ್ದಾರೆ. ಈ ಹಂತದಲ್ಲಿ ಎಲ್ಲ ಲಾಭ-ನಷ್ಟ ಅಧಿಕೃತರಿಗೆ ಮೀಸಲಾಗಿರುತ್ತದೆ. ಲಾಭದಲ್ಲಿ ಹಡೀಲು ಭೂಮಾಲಕರಿಗೆ ಒಂದಂಶ ಸಿಗಲಿದೆ. ಆದರೆ ಇದೊಂದು ಸವಾಲಿನ ಕೆಲಸವಾಗಿದೆ ಎಂದು ಸಚಿವ ಕೋಟ ಅಭಿಪ್ರಾಯಪಟ್ಟರು. ಭೂಮಾಲಕರ ಮನವೊಲಿಸುವ ಮತ್ತಿತರ ಕಾನೂನಾತ್ಮಕ ಜವಾಬ್ದಾರಿ ಗ್ರಾಪಂ ಪಿಡಿಒ, ವಿಎ, ಕೃಷಿ ಇಲಾಖೆ ಅಧಿಕಾರಿಗಳ ಮೇಲಿದೆ. ಹಡೀಲು ಭೂಮಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಭತ್ತದ ಬೇಸಾಯ ಮಾಡುವ ಮುಂಚೆ ಉಳುಮೆ, ಬೀಜ, ಬಿತ್ತನೆ, ಯಂತ್ರೋಪಕರಣಗಳ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದು ಸಚಿವ ಕೋಟ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ, ಗಂಜಿಮಠ ಗ್ರಾಪಂ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷೆ ಕುಮುದಾ ನಾಕ್, ತಹಶೀಲ್ದಾರ್ ಗುರುಪ್ರಸಾದ್, ದ.ಕ. ಜಂಟಿ ಕೃಷಿ ನಿರ್ದೇಶಕಿ ಸೀತಾ, ಕೃಷಿ ಉಪ ನಿರ್ದೇಶಕ ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕಿ (ಎಡಿ) ವೀಣಾ, ರೈತ ಮುಖಂಡ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.