ಭೂಮಿ ಮಂಜೂರು ಮಾಡುವಂತೆ ಪ್ರತಿಭಟನೆ

ರಾಯಚೂರು, ಮಾ.೧೬- ಭೂಮಿ ವಂಚಿತ ಬಗರ್ ಹುಕುಂ ಸಾಗುವಳಿದಾರರಿಗೆ ಕಾಲ ಮಿತಿಯಲ್ಲಿ ಭೂಮಿ ಮಂಜೂರು ಮಾಡುವಂತೆ ಭೂಮಿ ವಸತಿ ಹೋರಾಟ ಸಮತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಹಕ್ಕುಪತ್ರ ನೀಡುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಭೂಹೀನ ದಲಿತ, ಹಿಂದುಳಿದ ಮತ್ತು ಇನ್ನಿತರೆ ಸಮುದಾಯಗಳ ಜನರು ಸರಕಾರಿ, ಇನಾಂ, ಗೈರಾಣ, ಪರಂಪೋಕು, ಗ್ರಾಮಠಾಣ, ಖಾರೀಜ ಖಾತಾ, ಅರಣ್ಯ, ಗೋಮಾಳ ಹೆಸರಿನಲ್ಲಿರುವ ಭೂಮಿ, ಜಾಗಗಳಲ್ಲಿ ಹಲವಾರು ವರ್ಷಗಳಿಂದ ಬದುಕಿಗಾಗಿ- ಸಾಗುವಳಿ ಮಾಡುತ್ತಿದ್ದಾರಲ್ಲದೆ ನೆತ್ತಿಗೊಂಡು ಕೂರು, ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಾ ಬರುತ್ತಿದ್ದಾರೆ. ಭೂಮಿಯ ಪಟ್ಟಕ್ಕಾಗಿ ನಿವೇಶನಗಳ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಕೆಲವು ದಶಕಗಳೆ ಕಳೆದರೂ ಭೂಮಿ-ಜಾಗ ಮಾತ್ರ ರೈತರ ಹೆಸರಿಗೆ ದಕ್ಕಿಲ್ಲ. ನಗರ ಪ್ರದೇಶಗಳಲ್ಲಿರುವ ಬಹುತೇಕ ಸ್ಲಂಗಳಿಗೆ ವಾಸದ ಮನೆ, ನಿವೇಶನಗಳಿಗೆ ಹಕ್ಕುಪತ್ರಗಳಿಲ್ಲ. ಭೂಮಿಗಾಗಿ ಅರ್ಜಿ ಹಾಕಿದ ಅದೆಷ್ಟೋ ಜೀವಗಳ ಭೂಮಿಯ ಕನಸು ಕಾಣುತ್ತಲೇ ಮಣ್ಣುಪಾಲಾಗಿ ಹೋಗಿದ್ದಾರೆ. ಇವರೊಂದಿಗೆ ಅರ್ಜಿಗಳು ಸಹ ಗೆದ್ದಲಿಡಿದು ಹೋಗುತ್ತಿವೆ. ಬದುಕಿರುವವರು ಅರ್ಜಿ ಹಿಡಿದು ಕಛೇರಿಗಳ ಅಳೆಯುತ್ತಲೇ ಇದ್ದಾರ ಇಂದೋ ಏಳೆಯೇ ಭೂಮಿ ಸಿಕ್ಕೀತೆಂದು ಅಲೆಯುತ್ತಲೇ ಇದ್ದರು ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನಾಂ ರದ್ದತಿ ಕಾಯ್ದೆ ಜಾರಿಗೆ ಬಂದು ಹಲವು ದಶಕಗಳೇ ಕಳೆದರೂ ಮಠ-ವ್ಯಕ್ತಿಗಳ ಹೆಸರಲ್ಲಿ ಭೂಮಿ ಇದ್ದು ಈ ಭೂಮಿಗಳಲ್ಲಿ ಜನರು ಎರಡು ತಲೆಮಾರುಗಳಿಂದಲೂ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಇಂಥ ಭೂಮಿಯ ಪಟ್ಟಾಕ್ಕಾಗಿ ಅರ್ಜಿ ಸಲ್ಲಿಸಿದರೂ ಇದಕ್ಕೆ ಸಂಬಂಧಪಟ್ಟ ಸಮಿತಿಗಳಾಗಲೀ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಫಾರಂ ನಂ. ೫೭ ಹಾಕಿರುವ ರೈತರ ಪಂಚನಾಮ ವರದಿ ಮತ್ತು ಸರ್ವೆ ಹಾಗೂ ಜಿಪಿಎಸ್ ಆದಷ್ಟು ಬೇಗವರದಿ ತಯಾರಿ ಮಾಡಿ ಬಗರ್ ಹುಕುಂ ಮುಂದೆ ಮಂಡನೆ ಮಾಡಬೇಕು.
ಉಳುಮೆ ಮಾಡುತ್ತಿದ್ದು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿಯ ಮಂಜೂರಾತಿ ನೀಡಬೇಕು. ಮತ್ತು ಸರ್ಕಾರಿ ಅಥವಾ ಇನ್ನಿತರೆ ಜಾಗದಲ್ಲಿ ನಗರ ಪ್ರದೇಶವನ್ನು ಒಳಗೊಂಡಂತೆ ವಾಸ ಮಾಡುತ್ತಿರುವ ಜಾಗಗಳಿಗೆ ಹಕ್ಕುಪತ್ರ ನೀಡಬೇಕು.
ಈ ಮೇಲಿನ ಸಮಸ್ಯೆಗಳನ್ನು ಕಾಲ ಮಿತಿಯೊಳಗೆ ಬಗೆ ಹರಿಸಲು ಕ್ರಮತೆಗೆದುಕೊಳ್ಳಬೇಕು.
ಈಗಾಗಲೇ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಅಥವಾ ವಾಸ ಮಾಡುತ್ತಿರುವ ರೈತರನ್ನು ಜನರನ್ನು ಒಕ್ಕೆಲೇಳಿಸಬಾರದು.
ಈ ಎಲ್ಲಾ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆ ಹರಿಸಲು ಪಾರದರ್ಶಕತೆ ಮತ್ತು ಜಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಹೋರಾಟಗಾರರ ಒಳಗೊಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು ಮತ್ತು ಸಭೆಯ ತೀರ್ಮಾನಗಳನ್ನು ಜಾರಿ ಮಾಡಬೇಕು.
ಈ ಸಂದರ್ಭದಲ್ಲಿ ಮಾರೆಪ್ಪ ಹರವಿ, ಅಂಜಿನಯ್ಯ ಕುರುಬದೊಡ್ಡಿ, ಶ್ರೀನಿವಾಸ್ ಸೇರಿದಂತೆ ಉಪಸ್ಥಿತರಿದ್ದರು.