ಭೂಮಿ ಬಿರುಕು ಎನ್‌ಟಿಪಿಸಿಯ ನೀರಿನ ಮಾದರಿ ಹೊಂದಾಣಿಕೆಯಿಲ್ಲ

ಡೆಹರಾಡೂನ್,ಜ.೨೦-ಉತ್ತರಖಾಂಡದ ಜೋಶಿಮಠದಲ್ಲಿ ಭೂಮಿ ಬಿರುಕು ಬಿಟ್ಟಿರುವ ಕುರಿತಂತೆ ನಡೆಸಿದ ಅಧ್ಯಯನದಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ-ಎನ್‌ಟಿಪಿಸಿಯ ಯೋಜನೆಯ ನೀರಿನ ಮಾದರಿ ಹೊಂದಿಕೆಯಾಗುತ್ತಿಲ್ಲ ಎಂದು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ಪ್ರಾಥಮಿಕ ಪರೀಕ್ಷಾ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಭೂ ಕುಸಿತ-ಬಾಧಿತ ಪ್ರದೇಶದಲ್ಲಿ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ನಡೆಸಿದ ಪ್ರಾಥಮಿಕ ಪರೀಕ್ಷಾ ವರದಿ ಪಟ್ಟಣದಲ್ಲಿನ ಬಿರುಕುಗಳಿಂದ ಹೊರಬರುವ ನೀರು ತಪೊವನದ ಎನ್‌ಟಿಪಿಸಿ ಸುರಂಗದ ನೀರಿಗಿಂತ ಭಿನ್ನವಾಗಿದೆ ಎಂದು ತಿಳಿಸಲಾಗಿದೆ.

ವಿಪತ್ತು ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಲಸದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉತ್ತರಾಖಂಡದ ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಸಿನ್ಹಾ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಅಳವಡಿಸಿರುವ ಕ್ರ್ಯಾಕ್ ಮೀಟರ್‌ಗಳು ಕಳೆದ ಮೂರು ದಿನಗಳಲ್ಲಿ ಬಿರುಕುಗಳ ಅಗಲದಲ್ಲಿ ಯಾವುದೇ ಹೆಚ್ಚಳ ಸೂಚಿಸಿಲ್ಲ ಎಂದು ಹೇಳಿದ್ದಾರೆ.

ಪಟ್ಟಣದ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಮನೆಗಳ ಕೆಳಗಿನಿಂದ ಹರಿದು ಬರುತ್ತಿದ್ದ ನೀರಿನ ರಭಸಕ್ಕೆ ಈಗ ನಿರಂತರ ಇಳಿಕೆ ಕಂಡು ಬರುತ್ತಿದೆ. ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಪಟ್ಟಣದಲ್ಲಿ, ನೀರಿನ ಹೊರಹರಿವು ನಿಮಿಷಕ್ಕೆ ೧೦೦ ಲೀಟರ್‌ಗೆ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಕ್ರಮಕ್ಕಾಗಿ ಅಧ್ಯಯನ ವರದಿ ಆದಷ್ಟು ಬೇಗ ಹಂಚಿಕೊಳ್ಳಲು ತಿಳಿಸಲಾಗಿದೆ ಎಂದಿದ್ದಾರೆ.

ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತಾಂತ್ರಿಕ ಸಂಸ್ಥೆಗಳ ನಿರ್ದೇಶಕರು ಮತ್ತು ವಿಜ್ಞಾನಿಗಳು ಹಾನಿಗೊಳಗಾದ ಪ್ರದೇಶವನ್ನು ತಕ್ಷಣ ಅಧ್ಯಯನ ಮಾಡಿ ವರದಿಯನ್ನು ಶೀಘ್ರವಾಗಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ಅವರು ತಿಳಿಸಿದ್ದಾರೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಹೇಳಿದ್ದಾರೆ.

ಜೋಶಿಮಠದಲ್ಲಿ ತಾತ್ಕಾಲಿಕವಾಗಿ ಗುರುತಿಸಲಾದ ಪರಿಹಾರ ಶಿಬಿರಗಳಲ್ಲಿ ೬೧೫ ಕೊಠಡಿಗಳಿದ್ದು, ೨,೧೯೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಪಿಪಾಲ್ಕೋಟಿಯಲ್ಲಿ ೨,೨೦೫ ಜನರ ಸಾಮಥ್ರ್ಯವಿರುವ ೪೯೧ ಕೊಠಡಿಗಳಿವೆ. ಇಲ್ಲಿಯವರೆಗೆ ೮೪೯ ಕಟ್ಟಡಗಳು ಬಿರುಕು ಬಿಟ್ಟಿವೆ ಎಂದಿದ್ದಾರೆ.

ಗಾಂಧಿನಗರದಲ್ಲಿ ಒಂದು ವಾರ್ಡ್, ಸಿಂಗ್ ಧಾರ್‌ನಲ್ಲಿ ೨, ಮನೋಹರ್ ಬಾಗ್‌ನಲ್ಲಿ ೫, ಸುನಿಲ್‌ನಲ್ಲಿ ೭ ವಾರ್ಡ್ ಅಸುರಕ್ಷಿತ ಎಂದು ಘೋಷಿಸಲಾಗಿದೆ.೧೮೧ ಕಟ್ಟಡಗಳು ಅಸುರಕ್ಷಿತ ವಲಯದಲ್ಲಿದ್ದು, ಭದ್ರತೆಯ ದೃಷ್ಟಿಯಿಂದ ೨೫೮ ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಪ್ರಸ್ತುತ, ಸ್ಥಳಾಂತರಗೊಂಡ ಕುಟುಂಬ ಸದಸ್ಯರ ಸಂಖ್ಯೆ ೮೬೫ ಆಗಿದೆ ಎಂದಿದ್ದಾರೆ.