ಭೂಮಿ ನೀಡಿಕೆ ಸರಳೀಕರಣ ಸಿಎಂಗೆ ಎಫ್‌ಕೆಸಿಸಿಐ ಅಭಿನಂದನೆ

ಬೆಂಗಳೂರು, ಸೆ. ೭- ಕೈಗಾರಿಕಾ ಭೂಮಿ ಅನುಮೋದನೆ ಪ್ರಕ್ರಿಯೆಯಲ್ಲಿ ಐತಿಹಾಸಿಕ ನಿರ್ಣಯ ತೆಗೆದುಕೊಂಡು ವಿಧಾನಗಳನ್ನು ಸರಳೀಕರಿಸುವ ನಿಟ್ಟಿನಲ್ಲಿ ತಂದಿರುವ ನಿರ್ಣಯಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ಎಫ್‌ಕೆಸಿಸಿಐ ಅಭಿನಂದನೆ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಫ್‌ಕೆಸಿಸಿಐ ಅಧ್ಯಕ್ಷ ಡಾ. ಸಿಎಐಎಸ್‌ಐ ಪ್ರಸಾದ್, ಇದುವರೆಗೆ ಕೈಗಾರಿಕಾ ಭೂಮಿ ಅನುಮೋದನೆ ಇಚ್ಚಿಸುವ ಕೈಗಾರಿಕೋದ್ಯಮಿಗಳು ಭೂಮಿ ಪರಿಶೀಲನಾ ಸಮಿತಿ ಮುಂದೆ ತಮ್ಮ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದ ನಂತರ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಅಥವಾ ರಾಜ್ಯಮಟ್ಟದ ಉನ್ನತ ಸಮಿತಿಯ ಮುಂದೆ ಕೈಗಾರಿಕಾ ಸ್ಥಾಪನೆಗೆ ಅನುಮೋದನೆ ಪಡೆಯಬೇಕಾಗಿತ್ತು ಎಂದು ಹೇಳಿದರು.
ಈ ಹೊಸ ಸರಳೀಕರಣ ಪದ್ಧತಿಯಿಂದ ಈಗ ಕೈಗಾರಿಕೋದ್ಯಮಿಗಳು ಭೂಮಿ ಪರೀಕ್ಷಾ ಸಮಿತಿ ಮುಂದೆ ಅನುಮೋದನೆ ಪಡೆಯುವ ಅವಶ್ಯಕತೆಯಿರುವುದಿಲ್ಲ. ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಅಥವಾ ರಾಜ್ಯಮಟ್ಟದ ಉನ್ನತ ಸಮಿತಿಯ ಮುಂದೆ ತಮ್ಮ ಯೋಜನೆಯ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಹುದಾಗಿದೆ ಎಂದು ಹೇಳಿದರು.