ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ

ಬೀದರ:ಸೆ.25: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದ ರಸ್ತೆ ನಿರ್ಮಾಣದ ವೇಳೆಯಲ್ಲಿ ರೈತರ ಜಮೀನುಗಳನ್ನು ಆಕ್ರಮಣ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಪರಿಹಾರ ನೀಡಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಲಾಪದ ಶೂನ್ಯ ವೇಳೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಬೀದರ್ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ನಾವು ಚಾಲನೆ ನೀಡಿದ್ದೇವೆ. ಆದರೆ ರೈತರ ಹೆಚ್ಚುವರಿ ಜಮೀನುಗಳನ್ನು ರಸ್ತೆ ನಿರ್ಮಾಣದ ವೇಳೆ ಆಕ್ರಮಣ ಮಾಡಿಕೊಂಡು ರಸ್ತೆ ನಿರ್ಮಿಸಲಾಗುತ್ತಿದೆ.
ಸರ್ಕಾರದ ಈ ಕ್ರಮದ ಬಗ್ಗೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾಗದ ರಸ್ತೆ ನಿರ್ಮಾಣದ ವೇಳೆಯಲ್ಲಿ 20 ರಿಂದ 33 ಅಡಿಗಳಷ್ಟು ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಬೇಕು. ಆದರೇ ಆ ಕಡೆ ಹತ್ತು ಅಡಿ ಮತ್ತು ಈ ಕಡೆ ಹತ್ತು ಅಡಿಯಷ್ಟು ಅಗಲಿಕರಣ ಮಾಡಿ 50 ಅಡಿಗಳಷ್ಟು ರೈತರ ಜಮೀನು ಹೋಗುತ್ತಿದೆ. ಆಗಾಗಿ ಗ್ರಾಮ ಸಡಕ್ ಯೋಜನೆಯ ಬಗ್ಗೆ ಕ್ರಮವಹಿಸಬೇಕು.
ಕಳೆದ ಒಂದುವರೇ ತಿಂಗಳ ಹಿಂದೇ ನಾವು ಯೋಜನೆಗೆ ಚಾಲನೆ ನೀಡಿದ್ದೇವೆ. ಕೇಂದ್ರದ ಶೇ.60% ರಾಜ್ಯದ ಶೇ.40ರಷ್ಟು ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೇ ರೈತರಿಗೆ ಪರಿಹಾರ ನೀಡುವ ಯೋಜನೆ ಇದರಲ್ಲಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೂಲಕ ಕೊಡಿಸಲಿ ಇಲ್ಲವೇ ರಾಜ್ಯ ಸರ್ಕಾರ ತಾನೇ ಕೊಡಲಿ ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ರಸ್ತೆ ನಿರ್ಮಾಣದ ಹೆಸರಿನಲ್ಲಿ ಆಕ್ರಮಣ ಮಾಡಿಕೊಂಡರೆ ರೈತರು ಜೀವನ ನಡೆಸಲು ಹೇಗೆ ಸಾಧ್ಯ? ಕೇಂದ್ರ, ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದರು.
ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳರವರು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ರಸ್ತೆಗೆ ಮೂವತ್ತು ಅಡಿಗಳಷ್ಟು ಜಮೀನು ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಜಮೀನು ಬಳಸಿಕೊಳ್ಳುವಂತಿಲ್ಲ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮಕೈಗೊಳ್ಳುವ ಕೆಲಸ ಮಾಡುತ್ತೇವೆ ಎಂದರು.