ಭೂಮಿ ಕಳಕೊಂಡವರಿಗೆ ಪರಿಹಾರ: ರೈತರ ಸಂಭ್ರಮ

ಮುಳಬಾಗಿಲು,ಡಿ.೪- ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿದ್ದ ಗಡಿಭಾಗದ ರೈತರ ಪಿ ನಂ. ಜಮೀನಿನ ಮರಗಿಡಗಳ ಪರಿಹಾರವನ್ನು ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು ವಿತರಣೆ ಮಾಡಿದ ಹಿನ್ನೆಲೆಯಲ್ಲಿ ರೈತಸಂಘದ ಮುಖಂಡರು ಹಾಗೂ ನೊಂದ ರೈತರು ಸಂಭ್ರಮಾಚರಿಸಿ, ಕೃತಜ್ಞತೆ ಸಲ್ಲಿಸಿದರು.
ಸತತ ೧೦ ವರ್ಷಗಳಿಂದ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ಗಡಿಭಾಗದ ಏತರನಹಳ್ಳಿ, ಚುಕ್ಕನಹಳ್ಳಿ ರೈತರಿಗೆ ಅತಿ ಕಡಿಮೆ ಭೂ ಪರಿಹಾರವನ್ನು ನೀಡಿ ಪೂರ್ವಜರು ಬೆಳೆದಿದ್ದ ಮರಗಿಡಗಳ ಪರಿಹಾರ ನೀಡುವಂತೆ ನಿರಂತರವಾಗಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಕೇಳಿದರೂ ಪಿ ನಂಬರ್ ದುರಸ್ಥಿ ನೆಪದಲ್ಲಿ ಪರಿಹಾರ ನೀಡದೆ ಸತಾಯಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ರೈತಸಂಘ ಗಡಿಭಾಗದ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸತತವಾಗಿ ೨ ವರ್ಷಗಳಿಂದ ನೂರಾರು ಹೋರಾಟ ಮಾಡಿ ಅಧಿಕಾರಿಗಳ ಗಮನಕ್ಕೆ ತಂದ ನಂತರ ನೊಂದ ರೈತರಿಗೆ ತಾಲೂಕು ದಂಡಾಧಿಕಾರಿಗಳ ವರದಿಯಂತೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ವಿಶೇಷ ಭೂಸ್ವಾಧೀನಾಧಿಕಾರಿಗೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ಬಿಡುಗಡೆಯಾಗಿರುವುದು ನೊಂದ ರೈತರು ಹಾಗೂ ರೈತಸಂಘದ ಹೋರಾಟಕ್ಕೆ ಜಯ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹರ್ಷ ವ್ಯಕ್ತಪಡಿಸಿದರು.
ನೊಂದ ರೈತರಾದ ಚಂಗೇಗೌಡ, ರಾಜಣ್ಣ, ವೆಂಕಟೇಶ್, ಜನಾರ್ಧನ ಮಾತನಾಡಿ, ಭೂ ಪರಿಹಾರಕ್ಕಾಗಿ ಹತ್ತಾರು ವರ್ಷಗಳಿಂದ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳು ಜಿಲ್ಲಾಡಳಿತ ಕಚೇರಿಗಳಿಗೆ ಅಲೆದಾಡಿ ನಮಗೆ ಬೇಸರವಾಗಿ ಕೋಮಾ ಸ್ಥಿತಿಯಲ್ಲಿರುವ ರೋಗಿಯಂತೆ ನಮ್ಮ ಪರಿಹಾರವೂ ಕೋಮಾ ಸ್ಥಿತಿಯಲ್ಲಿದೆ. ಬಿಡುಗಡೆ ಆಗುವುದಿಲ್ಲವೆಂಬ ನಿರಾಶೆಯಲ್ಲಿ ಕೈ ಬಿಡಬೇಕೆಂದಾಗ ರೈತಸಂಘ ನಮ್ಮ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸತತವಾಗಿ ಹೋರಾಟದ ಹಿನ್ನಲೆಯಲ್ಲಿ ಪರಿಹಾರ ಲಭಿಸಿದೆ ಎಂದರು
ಜಿಲ್ಲಾಧಿಕಾರಿಗಳು ನಮ್ಮ ಭೂ ಪರಿಹಾರ ಅತಿ ಕಡಿಮೆಯಾಗಿದ್ದು, ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ. ಅದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರಕ್ಕೆ ಆದೇಶ ಮಾಡಬೇಕು. ೨ನೇ ಮರಗಿಡಗಳ ಕಂತನ್ನು ಶೀಘ್ರವಾಗಿ ಬಿಡುಗಡೆ ಮಾಡಿಸಬೇಕೆಂದು ಒತ್ತಾಯಿಸಿದರು.
ಸಂಭ್ರಮಾಚರಣೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ನೊಂದ ರೈತರಾದ ಮಂಗಮ್ಮ, ಸೀನಪ್ಪ, ಕುಮಾರ್, ನಟರಾಜ್, ಮತ್ತಿತರರು ಭಾಗವಹಿಸಿದ್ದರು.