ಭೂಮಿಯ ಸಂರಕ್ಷಣೆ ಎಲ್ಲರ ಹೊಣೆ

ಕಲಬುರಗಿ:ಎ.22: ಮಾನವ, ಪ್ರಾಣಿಗಳು, ಸಸ್ಯಗಳು ಸೇರಿದಂತೆ ಜಗತ್ತಿನ ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಕತೃವಾದ ಭೂಮಿಯು ಅನೇಕ ಕಾರಣಗಳಿಂದ ಇಂದು ಮಾಲಿನ್ಯವಾಗಿದೆ. ಇದರಿಂದ ಸಕಲ ಜೀವರಾಶಿಗಳ ಬದುಕಿಗೆ ಅಪಾಯ ಉಂಟಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಎಲ್ಲಾ ಜೀವಿಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ಭೂಮಿಯ ಸಂರಕ್ಷಣೆ ಮಾಡುವದು ಎಲ್ಲರ ಹೊಣೆಯಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ರಾಮಮಂದಿರ ಸಮೀಪದಲ್ಲಿರುವ 'ಕೊಹಿನೂರ ಪದವಿ ಕಾಲೇಜ್'ನಲ್ಲಿ, 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಸರಳವಾಗಿ ಜರುಗಿದ 'ವಿಶ್ವ ಭೂಮಿ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸೂರ್ಯನನ್ನು ಸುತ್ತುತ್ತಿರುವ 8 ಗ್ರಹಗಳಲ್ಲಿ ಭೂಮಿಯು ಮೂರನೇಯದಾಗಿದೆ. ವಾಯು,ನೀರು,ನೆಲ ಹೊಂದಿರುವ ಜೀವಿಗಳು ವಾಸಿಸಲು ಯೋಗ್ಯವಾಗಿರುವ ಏಕೈಕ ಗ್ರಹ ನಮ್ಮದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಮಾನವನ ದುರಾಸೆಯಂತಹ ಕಾರಣಗಳಿಂದ ಭೂಮಿಯು ಮಲಿನವಾಗಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಹಸಿರು ಮನೆ ಪರಿಣಾಮ,ಓಝೋನ ಪದರಿನ ನಾಶ, ಕುಡಿಯುವ ನೀರಿನ ಅಭಾವ, ಜೀವ ಸಂಕುಲದ ಮೇಲೆ ದುಷ್ಪರಿಣಾಮ, ಅರಣ್ಯಗಳ ಕ್ಷೀಣತೆ, ಭೂಮಿಯ ಗುಣಮಟ್ಟದ ಪ್ರಮಾಣ ಕಡಿಮೆ, ಮಳೆಯ ಪ್ರಮಾಣ ಕುಸಿತವಾಗಿರುವದು ಸೇರಿದಂತೆ ಅನೇಕ ಪರಿಣಾಮಗಳು ಉಂಟಾಗುತ್ತಿವೆ. ಇದನ್ನು ತಡೆಗಟ್ಟಿ, ಭೂಮಿಯ ಸಂರಕ್ಷಣೆ ಮಾಡಬೇಕೆಂದು ನುಡಿದರು.

   ಸಮಾಜಸೇವಕ ಸುನೀಲಕುಮಾರ ವಂಟಿ ಮಾತನಾಡಿ, ಪ್ಲಾಸ್ಟಿಕ ಬಳಕೆಗಳನ್ನು ಮಾಡಬಾರದು. ಪರಿಸರವನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು. ಎಲ್ಲೆಡೆ ಗಿಡಗಳನ್ನು ಬೆಳೆಸಬೇಕು, ಸಾವಯುವ ಬೇಸಾಯಕ್ಕೆ ಉತ್ತೇಜನ ನೀಡಬೇಕು. ಭೂಮಿಯನ್ನು ಉಳಿಸಿ, ಬೆಳೆಸುವ ಸಕಲ್ಪ ಮಾಡಬೇಕಾಗಿದೆ. ನಮ್ಮ ಭೂಮಿ, ನಮ್ಮ ಭವಿಷ್ಯವಾಗಿದೆಯೆಂದರು.

ಕಾರ್ಯಕ್ರಮದಲ್ಲಿ ನರಸಪ್ಪ ಬಿರಾದಾರ ದೇಗಾಂವ, ಡಾ.ಹಣಮಂತರಾಯ ಬಿ.ಕಂಟೆಗೋಳ್, ದಿನೇಶ ದೊಡ್ಡಮನಿ, ದೇವೇಂದ್ರಪ್ಪ ಗಣಮುಖಿ, ರಾಯಣ್ಣಗೌಡ ಶ್ರೀಗಿರಿ, ಹಣಮಂತ ವಂಟಿ ಇದ್ದರು.