ಭೂಮಿಯ ತೇವಾಂಶ ಆಧರಿಸಿ ಬಿತ್ತನೆ ಮಾಡಿ

ಭಾಲ್ಕಿ:ಜೂ.10: ತಾಲ್ಲೂಕಿ ನಲ್ಲಿ ಮುಂಗಾರು ಹಂಗಾಮಿನಲ್ಲಿ 86,260 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಮಸ್ಕಲೆ ಅವರು ರೈತರಿಗೆ ಹಲವು ಸಲಹೆ ನೀಡಿದ್ದಾರೆ.

ತಾಲ್ಲೂಕಿನಲ್ಲಿ ಅತಿ ಹೆಚ್ಚು 50 ಸಾವಿರ ಹೆಕ್ಟೇರ್ ಸೋಯಾ ಅವರೆ ಬಿತ್ತನೆ ಪ್ರದೇಶವಾಗಿದೆ. 18 ಸಾವಿರ ಹೆಕ್ಟೇರ್ ತೊಗರಿ, 5 ಸಾವಿರ ಹೆಸರು, 4 ಸಾವಿರ ಉದ್ದು, 2500 ಜೋಳ ಸೇರಿ ವಿವಿಧ ಬೆಳೆ ಬೆಳೆಯುವ ಪ್ರದೇಶವಾಗಿದೆ. ರೈತರಿಗೆ ಹಲವು ಸಲಹೆ ನೀಡಿದ್ದಾರೆ.

ಸೋಯಾ ಅವರೆ: ಭೂಮಿಯಲ್ಲಿ ತೇವಾಂಶ ಗಮನಿಸಿ ಜೂನ್‌ನಿಂದ ಜುಲೈ 15ರ ವರೆಗೆ ಬಿತ್ತನೆ ಸಮಯವಾಗಿದೆ. 5 ಸೆಂ.ಮೀ.ಗಿಂತ ಹೆಚ್ಚಿನ ಆಳದಲ್ಲಿ ಬಿತ್ತನೆ ಮಾಡಬಾರದು. ಜೆ.ಎಸ್. 335 ಮತ್ತು ಎಸ್.ಬಿ 21 ತಳಿ ಬೀಜ ಬಿತ್ತನೆ ಉತ್ತಮ.ಪ್ರತಿ ಎಕರೆಗೆ 2.5 ಟನ್ ಕೊಟ್ಟಿಗೆ/ಕಾಂಪೋಸ್ಟ್ ಗೊಬ್ಬರ, ರಾಸಾಯನಿಕ ಗೊಬ್ಬರ ಎಕರೆಗೆ ಸಾರಜನಕ 16 ಕೆ.ಜಿ, ರಂಜಕ 32 ಕೆ.ಜಿ, ಪೊಟ್ಯಾಷ್ 10 ಕೆ.ಜಿ, ಗಂಧಕ ಬಳಸಬಹದು. ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತುವ ಕೂರಿಗೆಯಿಂದ ಬಿತ್ತುವಾಗ ಶಿಫಾರಿಸಿದ ಎಲ್ಲ ರಸಗೊಬ್ಬರ ಹಾಕಬೇಕು.
ತೊಗರಿ: ತೊಗರಿ ಜಿ.ಎಸ್.ಎಂ.ಆರ್ 736 ತಳಿ ಬಿತ್ತನೆ ಉತ್ತಮ. ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜಗಳನ್ನು ಶೇ.2ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 1 ತಾಸು ನೆನೆಸಿ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು. ಎಕರೆಗೆ ರೈಜೋಬಿಯಂ 200 ಗ್ರಾಂ, ರಂಜಕ ಕರಗಿಸುವ ಅಣುಜೀವಿ 200 ಗ್ರಾಂ ಬಳಬೇಕು. ಜೂನ್ 15ರ ವರೆಗೆ ಬಿತ್ತನೆಗೆ ಉತ್ತಮ ಸಮಯವಾಗಿದ್ದು, ನಂತರವೂ ಬಿತ್ತನೆ ಮಾಡಬಹುದಾಗಿದೆ. ಎಕರೆಗೆ 1 ಕಿ.ಗ್ರಾಂ ಬೀಜ ಬಳಸಬಹುದು. ಕೊಟ್ಟಿಗೆ/ಕಾಂಪೋಸ್ಟ್ ಗೊಬ್ಬರ 2.4 ಟನ್ ಎಕರೆಗೆ ಹಾಕಬೇಕು.

ರಾಸಾಯನಿಕ ಗೊಬ್ಬರ ಎಕರೆಗೆ ಸಾರಜನಕ 10 ಕೆ.ಜಿ, ರಂಜಕ 20 ಕೆ.ಜಿ, ಪೊಟ್ಯಾಷ್ 5 ಕೆ.ಜಿ (ಕೆಂಪು ಭೂಮಿಗೆ ಮಾತ್ರ), ಯೂರಿಯಾ 4.4 ಕಿ.ಗ್ರಾಂ, ಡಿಎಪಿ 44 ಕಿ.ಗ್ರಾಂ. ಗಂಧಕ 8 ಕೆ.ಜಿ, 40 ಕಿ.ಗ್ರಾಂ ಜಿಪ್ಸ್‌ಂ ಬಳಸಬೇಕು.

ಹೆಸರು: ಜೂನ್ ಅಂತ್ಯದ ವರೆಗೂ ಹೆಸರು ಬಿತ್ತನೆ ಮಾಡಬಹುದು. ಬಿ.ಜಿ.ಎಸ್ 9 ತಳಿ ಬಿತ್ತನೆಗೆ ಉತ್ತಮ. ಬೀಜ ಗಳಲ್ಲಿ ಬರ ನಿರೋಧಕ ಶಕ್ತಿ ಹೆಚ್ಚಿಸಲು ಬೀಜೋಪಚಾರ ಮಾಡಬೇಕು.

ಉದ್ದು: ಜೂನ್ ಕೊನೆಯ ವರೆಗೂ ಬಿತ್ತನೆ ಮಾಡಬಹುದಾಗಿದ್ದು, ಡಿ.ಬಿ.ಜಿ.ವಿ 5 ತಳಿ ಬಿತ್ತನೆಗೆ ಉತ್ತಮ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿತ್ತನೆ ಬೀಜಗಳಿಗೆ ದರ ನಿಗದಿ

ಮುಂಗಾರು ಹಂಗಾಮಿನ ವಿವಿಧ ಬೀಜಗಳಿಗೆ ದರ ನಿಗದಿಪಡಿಸಲಾಗಿದೆ.

ಸೋಯಾ ಅವರೆ ಜೆಎಸ್-335 (30 ಕೆ.ಜಿ) ಬ್ಯಾಗ್ ಸಾಮಾನ್ಯ ರೈತರಿಗೆ ₹2370 ಮತ್ತು ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹1995, ತೊಗರಿ ಜಿಆರ್‌ಜಿ 5 ಕೆ.ಜಿ. ಬ್ಯಾಗ್ ಸಾಮಾನ್ಯ ರೈತರಿಗೆ ₹400, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹337.50, ತೊಗರಿ ಬಿಎಸ್‌ಎಂಆರ್, ಡಿಬಿಜಿವಿ 5 ಸಾಮಾನ್ಯ ರೈತರಿಗೆ ₹425, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹362.50, ಉದ್ದು ಟಿಎಯು 1 (5 ಕೆ.ಜಿ) ಬ್ಯಾಗ್ ಸಾಮಾನ್ಯ ರೈತರಿಗೆ ₹395, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹332.50, ಹೆಸರು ಬಿಜಿಎಸ್ 5 ಕೆ.ಜಿ. ಬ್ಯಾಗ್ ಸಾಮಾನ್ಯ ರೈತರಿಗೆ ₹495, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹432.50 ಮತ್ತು ಜೋಳ ಸಿಎಸ್ ಹೆಚ್ 3 ಕೆ.ಜಿ. ಬ್ಯಾಗ್ ಸಾಮಾನ್ಯ ರೈತರಿಗೆ ₹132 ಮತ್ತು ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ₹87 ನಿಗದಿ ಪಡಿಸಲಾಗಿದೆ.