ಭೂಮಿಯ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ: ಸತ್ಯಂಪೇಟೆ

ಕಲಬುರಗಿ:ಏ.24: ಭೂಮಿ ಮತ್ತು ಪ್ರಕೃತಿ ಇವೆರಡನ್ನು ರಕ್ಷಿಸುವ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮುಡಿಸಲು ವಿಶ್ವ ಭೂದಿನ, ಪರಿಸರ ದಿನ, ಜಲದಿನ ಮುಂತಾದ ದಿನಗಳನ್ನು ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯ (ಯುವ ರೆಡ್ ಕ್ರಾಸ್ ಘಟಕ) ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಭೂದಿನದ ಧ್ಯೇಯವಾಕ್ಯ ಪ್ಲಾನೆಟ್ ವರ್ಸೆಸ್ ಪ್ಲಾಸ್ಟಿಕ್ ಆಗಿದ್ದು, ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಮೂಲಕ ಭೂಮಿಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ತೈಲ, ಖನಿಜ, ಶಿಲೆ, ಅಗ್ನಿ, ವಾಯು ಹೀಗೆ ಅಸಂಕಖ್ಯಾತ ಜೀವರಾಶಿ ಹೊಂದಿರುವ ಭೂಮಿ ತಾಯಿಯ ಒಡಲನ್ನು ಬರಿದು ಮಾಡದೆ ಪರಿಸರಕ್ಕೆ ಪೂರಕವಾಗಿ ಬದುಕಬೇಕಾಗಿದೆ. ಹೆಣ್ಣಿನ ಮೇಲಿನ ಅತ್ಯಾಚಾರದಂತೆ ಭೂ ತಾಯಿಯ ಮೇಲೂ ಮಾನವ ಅತ್ಯಾಚಾರ ಕೂಡ ಜಾಸ್ತಿಯಾಗಿರುವುದರಿಂದ ಭೂ ಮಾತೆ ದೀರ್ಘ ಕಾಲದ ರೋಗದಿಂದ ಬಳಲುವಂತಾಗಿದೆ. ಭೂಮಿಯ ಆರೋಗ್ಯ ಕಾಪಾಡಿಕೊಂಡು ಬರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ವಿಭಾಗೀಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ವಿಶೇಷ ಉಪನ್ಯಾಸ ನೀಡಿ, ಭೂಮಿಯನ್ನು ಉಳಿಸುವ ಬಗ್ಗೆ ಮಾತನಾಡುವ ಸ್ಥಿತಿ ಬಂದೊದಗಿರುವುದು ಮನುಷ್ಯ ಕುಲದ ದುರಂತ ಸಂಗತಿಯಾಗಿದೆ ಎಂದರು.

ಹವಾಮಾನ ವೈಪರಿತ್ಯ, ಯಾಂತ್ರಿಕ ಉಪಕರಣಗಳ ಬಳಕೆಯ ಬೆನ್ನು ಹತ್ತಿದ ಇಂದಿನ ಆಧುನಿಕ ಜೀವನ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದೆ. ಪ್ರಕೃತಿ ಸಂರಕ್ಷಣೆಯಿಂದ ಏನೆಲ್ಲವೂ ಸಾಧ್ಯ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಸಭಾಪತಿ ಅರುಣಕುಮಾರ ಲೋಯಾ, ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಮಾತನಾಡಿದರು.

ಯುವರೆಡ್ ಕ್ರಾಸ್ ಜಿಲ್ಲಾ ಸಂಚಾಲಕ ಡಾ. ಪದ್ಮರಾಜ ರಾಸಣಗಿ, ಜಂಟಿ ಕಾರ್ಯದರ್ಶಿ ಸುರೇಶ ಬಡಿಗೇರ, ಕಾಲೇಜಿನ ಕಾರ್ಯಕ್ರಮಾಧಿಕಾರಿ ನಾಗರಾಜ ಆರ್. ನಿರ್ಣಾ, ರೆಡ್ ಕ್ರಾಸ್ ಪದಾಧಿಕಾರಿ ಜಿ.ಎಸ್. ಪದ್ಮಾಜಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪರಿಸರ ಉಪ ಸಮಿತಿ ಸಂಚಾಲಕ ಡಾ.ಶರಣಬಸಪ್ಪ ವಡ್ಡನಕೇರಿ ವೇದಿಕೆಯಲ್ಲಿದ್ದರು.

ಕಾಲೇಜಿನ ಆಡಳಿತಾಧಿಕಾರಿ ಡಾ.ಬಸವರಾಜ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ವಿಶಾಖಾ ಪ್ರಾರ್ಥನೆಗೀತೆ ಹಾಡಿದರು. ಶರಣಗೌಡ ಇನಾಮದಾರ ಸ್ವಾಗತಿಸಿದರು. ನಾಗೇಶ ಮಡಿವಾಳ ನಿರೂಪಿಸಿದರು. ಜ್ಯೋತಿ ಬಿರಾದಾರ ವಂದಿಸಿದರು.


ಮಾನವೀಯ ತತ್ವ, ಮೌಲ್ಯ ಉತ್ತೇಜನ, ವಿಪತ್ತು ಪ್ರಕ್ರಿಯೆ, ವಿಪತ್ತು ಸಿದ್ಧತೆ, ಆರೋಗ್ಯದ ಕಾಳಜಿ ಕುರಿತು ಸೇವೆ ಒದಗಿಸುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಕೆಲಸ ಕೂಡ ಮಾಡುತ್ತಿದೆ.
-ರವೀಂದ್ರ ಶಾಬಾದಿ, ಜಿಲ್ಲಾ ಗೌರವ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಲಬುರಗಿ