ಭೂಮಿಗೆ ಗಂಗೆಯನ್ನು ಹರಿಸಿದ ಭಗೀರಥ ಮಹರ್ಷಿ

ಕಲಬುರಗಿ:ಮೇ.18: ಭಾರತ ಅನೇಕ ಮಹನೀಯರ, ಶರಣರ, ಋಷಿ ಮುನಿಗಳ ತವರೂರಾಗಿದೆ. ಇದರಲ್ಲಿ ಭಗೀರಥ ಮಹರ್ಷಿ ಕೇವಲ ರಾಜ ಮಾತ್ರನಾಗಿರದೆ, ಭಕ್ತಿಯ ಸಂಪನ್ನನಾಗಿದ್ದರು. ಅವರು ಘೋರವಾದ ತಪ್ಪಸ್ಸನ್ನು ಮಾಡಿ ಭೂಮಿಗೆ ಗಂಗೆಯನ್ನು ಹರಿಸುವ ಮೂಲಕ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಇವರ ಚರಿತ್ರೆಯಿಂದ ತಿಳಿದು ಬರುತ್ತದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಸಂತೋಷ ಕಾಲನಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸರಳವಾಗಿ ಜರುಗಿದ ‘ಭಗಿರಥ ಮಹರ್ಷಿ ಜಯಂತಿ’ಯಲ್ಲಿ ಮಾತನಾಡುತ್ತಿದ್ದ ಅವರು, ನುಡಿಗಟ್ಟಾಗಿ ಬಳಸುವ ‘ಭಗೀರಥ ಪ್ರಯತ್ನ’ ಎಂಬ ಪದವು, ಇವರು ಪಟ್ಟಂತಹ ಪ್ರಯತ್ನ ಎಂಥಹದೆಂದು ನಮಗೆ ತಿಳಿದು ಬರುತ್ತದೆ. ‘ನಿರಂತರ ಪ್ರಯತ್ನವೇ ಸಾಧನೆಗೆ ಕಾರಣ’ ಎಂಬುದು ಇವರ ಪ್ರಮುಖ ಸಂದೇಶ, ತತ್ವವಾಗಿದೆಯೆಂದರು.

ಸಹ ಶಿಕ್ಷಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಭಗೀರಥರು ಶ್ರೇಷ್ಠ ಮಹರ್ಷಿಯಾಗಿದ್ದಾರೆ. ಬಾಲ್ಯದಿಂದಲೇ ಸದ್ಗುಣ, ವಿನಯಶೀಲತೆ, ಸಹೃದಯತೆ, ಸಂಸ್ಕಾರದಂತಹ ಮುಂತಾದ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರು ರಾಜನಾಗಿ ಎಲ್ಲಾ ಪ್ರಜೆಗಳನ್ನು ಅತ್ಯಂತ ಗೌರವಯುತವಾಗಿ, ನ್ಯಾಯಬದ್ಧವಾಗಿ ನೋಡಿಕೊಳ್ಳುತ್ತಿದ್ದರೆಂದು ನುಡಿದರು.

ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಅಣ್ಣಾರಾಯ ಎಚ್.ಮಂಗಾಣೆ, ಶಿವಪುತ್ರಯ್ಯಸ್ವಾಮಿ ಬೆಣ್ಣೂರ್ ಇದ್ದರು.